ಹೈದರಾಬಾದ್‌ (ಅ. 04): ಬ್ರಿಟನ್‌ನ ನಾಟ್‌ವೆಸ್ಟ್‌ ಬ್ಯಾಂಕ್‌ನಲ್ಲಿರುವ ಹೈದರಾಬಾದ್‌ ನಿಜಾಮರಿಗೆ ಸೇರಿದ 305 ಕೋಟಿ ರು. ಯಾರಿಗೆಲ್ಲಾ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ಭಾರತ ಸರ್ಕಾರ ಮತ್ತು ನಿಜಾಮ ವಂಶಸ್ಥರ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿತ್ತು ಎಂಬ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕಾರ ಭಾರತ ಸರ್ಕಾರಕ್ಕೆ ಎಷ್ಟುಪಾಲು ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ನಿಜಾಮರ ಕುಟುಂಬಕ್ಕೆ ಸಿಗುವ ಪಾಲಿನಲ್ಲಿ 120 ಮಂದಿ ಹಂಚಿಕೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‌ ನಿಜಾಮ ಆಸಫ್‌ ಝಾ 1948ರಲ್ಲಿ ಲಂಡನ್‌ ಬ್ಯಾಂಕ್‌ ಶಾಖೆಯಲ್ಲಿನ ಪಾಕ್‌ ರಾಯಭಾರಿ ಖಾತೆಗೆ ಸುಮಾರು 7 ಕೋಟಿ ರು. ವರ್ಗಾಯಿಸಿದ್ದರು. ಆದರೆ, ಕೆಲವು ದಿನಗಳ ಬಳಿಕ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದು, ವಾಪಸ್‌ ನೀಡಲು ಪಾಕ್‌ಗೆ ಕೋರಲಾಗಿತ್ತು. ಆದರೆ, ಪಾಕ್‌ ನಿರಾಕರಿಸಿತ್ತು. ಆ ಬಳಿಕ ಏರ್ಪಟ್ಟಕಾನೂನು ಹೋರಾಟದಲ್ಲಿ ಇದೀಗ ತೀರ್ಪು ಭಾರತದ ಪರ ಬಂದಿದೆ. ಬ್ಯಾಂಕ್‌ ಬಡ್ಡಿಯ ಪರಿಣಾಮ ಆಗ ಇಡಲಾಗಿದ್ದ 7 ಕೋಟಿ ರು. ಇದೀಗ 305 ಕೋಟಿ ರು. ಆಗಿ ಪರಿವರ್ತನೆಯಾಗಿದೆ.

ಈ ಬಗ್ಗೆ ಮಾತನಾಡಿದ ನಗರದ ಇತಿಹಾಸಕಾರರೊಬ್ಬರು, ಪ್ರಕರಣವು ಭಾರತಕ್ಕೆ 305 ಕೋಟಿ ರು.ನ ಅಳಿವು-ಉಳಿವಿನ ಪ್ರಶ್ನೆಯಾಗಿರಲಿಲ್ಲ. ಆದರೆ, ಪಾಕಿಸ್ತಾನದ ವಿರುದ್ಧ ಜಯಿಸಲೇಬೇಕು ಎಂಬ ಪ್ರತಿಷ್ಠೆಯಾಗಿತ್ತಷ್ಟೇ. ಆದರೆ, ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ನಿಜಾಮ ಕುಟುಂಬಸ್ಥರಿಗೆ ಬುಧವಾರದ ತೀರ್ಪು ಒಂದು ಜಾಕ್‌ಪಾಟ್‌ ಆಗಿಯೇ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.