ನವದೆಹಲಿ[ಅ.05]: ಬಾಲಾಕೋಟ್‌ ದಾಳಿ ಬಳಿಕ ಭಾರತ- ಪಾಕ್‌ ನಡುವಿನ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದ ವೇಳೆ ಭಾರತೀಯ ವಾಯುಪಡೆ, ತನ್ನದೇ ಹೆಲಿಕಾಪ್ಟರ್‌ ಅನ್ನು ತಪ್ಪಾಗಿ ಗುರುತಿಸಿ ಹೊಡೆದುರುಳಿಸಿದ್ದು ಬಹುದೊಡ್ಡ ತಪ್ಪು ಎಂದು ಐಎಎಫ್‌ನ ನೂತನ ಮುಖ್ಯಸ್ಥ ರಾಕೇಶ್‌ ಕುಮಾರ್‌ ಸಿಂಗ್‌ ಭದೌರಿಯಾ ತಿಳಿಸಿದ್ದಾರೆ. ಅಲ್ಲದೆ, ಈ ಘಟನೆ ಸಂಬಂಧ ಇಬ್ಬರು ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ವಾರ್ಷಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿದ ಭದೌರಿಯಾ ಅವರು, ‘ಬಾಲಾಕೋಟ್‌ ದಾಳಿ ಸೇರಿದಂತೆ ಹಲವು ಕಾರ್ಯಾಚರಣೆಗಳ ಮೂಲಕ ಐಎಎಫ್‌ ನೂತನ ಮೈಲುಗಲ್ಲನ್ನೇ ಸೃಷ್ಟಿಸಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಎದುರಾಗುವ ಯಾವುದೇ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದು, ಹಿಂದಿನ ಪ್ರಶಸ್ತಿ ಹಾಗೂ ಸನ್ಮಾನಗಳಲ್ಲೇ ಮೈಮರೆತು ಕುಳಿತುಕೊಳ್ಳುವುದಿಲ್ಲ’ ಎಂದಿದ್ದಾರೆ.

ವಿಜಯದಶಮಿ ಹಾಗೂ ವಾಯುಪಡೆ ಸಂಸ್ಥಾಪನಾ ದಿನವಾದ ಅ.8ರಂದು ರಫೇಲ್‌ ಯುದ್ಧ ವಿಮಾನ ಭಾರತ ಸೈನ್ಯಕ್ಕೆ ಸೇರ್ಪಡೆಯಾಗಲಿದೆ. ರಫೇಲ್‌ ಹಾಗೂ ಎಸ್‌-400 ವೈಮಾನಿಕ ಭದ್ರತಾ ವ್ಯವಸ್ಥೆಗಳು ಐಎಎಫ್‌ ಕಾರ್ಯಾಚರಣೆಯ ಸಾಮರ್ಥ್ಯವನ್ನು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ ಎಂದರು.