Asianet Suvarna News Asianet Suvarna News

ಸಾಲಮನ್ನಾಗೆ ಬೇರೆ ಇಲಾಖೆಗಳ ಹಣ ಬಳಕೆ?

ಆದದ್ದಾಗಲಿ ರೈತರ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಎಂದು ಹೊರಟಿರುವ ಕುಮಾರಸ್ವಾಮಿಗೆ ಸಂಪನ್ಮೂಲದ ಕೊರತೆ ಎದುರಾಗಿದೆ. ಬೇರೆ ಇಲಾಖೆಗಳಲ್ಲಿ ಬಳಕೆಯಾಗದೇ ಉಳಿದಿರುವ ಅನುದಾನವನ್ನು ಬಳಸಲು ಸರ್ಕಾರ ನಿರ್ಧರಿಸಿದೆ. 

Other Department fund use to loan waive off

ಬೆಂಗಳೂರು (ಜೂ. 03): ಶತಾಯಗತಾಯ ರೈತರ ಸಾಲಮನ್ನಾ ಮಾಡಲು ಹೊರಟಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ನಡೆಸಿದೆ. ರೈತರ ಸಂಪೂರ್ಣ ಬೆಳೆ ಸಾಲಮನ್ನಾ ಮಾಡಲು ಸರ್ಕಾರ ಅಂದಾಜಿಸಿರುವ ಪ್ರಕಾರ ಸುಮಾರು 35 ಸಾವಿರ ಕೋಟಿ ರು.ಗಳಷ್ಟುಬೃಹತ್‌ ಧನರಾಶಿಯ ಅಗತ್ಯವಿದ್ದು, ಅದಕ್ಕಾಗಿ ವಿವಿಧ ಇಲಾಖೆಯಲ್ಲಿ ಬಳಕೆಯಾಗದೆ ಉಳಿದಿರುವ ಅನುದಾನದ ಮೊತ್ತವನ್ನು ವಿನಿಯೋಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಕಳೆದ ಆರ್ಥಿಕ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನೀಡಿದ್ದ ಅನುದಾನವನ್ನು ರಾಜ್ಯ ಬೊಕ್ಕಸಕ್ಕೆ ಹಿಂದುರುಗಿಸಲು ಸರ್ಕಾರದಿಂದ ಮೌಖಿಕ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಇಂಥದ್ದೊಂದು ಪ್ರಕ್ರಿಯೆ ಸದ್ದಿಲ್ಲದೆ ಪ್ರಾರಂಭವಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಕಳೆದ ಸಾಲಿನಲ್ಲಿ ನೀಡಲಾಗಿದ್ದ .24 ಕೋಟಿ ಹಣ ವಾಪಸ್‌ ಪಡೆಯಲಾಗಿದೆ. ಇದೇ ರೀತಿ, ಇತರೆ ಇಲಾಖೆಗಳಿಂದಲೂ ಬಳಕೆಯಾಗದ ಹಣವನ್ನು ವಾಪಸ್‌ ಪಡೆಯಲಾಗುತ್ತಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಇದಲ್ಲದೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ .600 ಕೋಟಿ ನಿಶ್ಚಿತ ಠೇವಣಿ (ಎಫ್‌.ಡಿ) ಇದೆ ಎನ್ನಲಾಗಿದ್ದು, ಅದನ್ನೂ ಸಾಲಮನ್ನಾ ಯೋಜನೆಗೆ ಬಳಸಿಕೊಳ್ಳಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ, ಈ ರೀತಿ ಮೀಸಲಿಟ್ಟಅನುದಾನವನ್ನು ಬೇರೆ ಉದ್ದೇಶಕ್ಕೆ ವರ್ಗಾಯಿಸುವುದು ಕಾನೂನು ಪ್ರಕಾರ ಅಸಾಧ್ಯ ಎಂಬುದು ಶಾಸನ ತಜ್ಞರ ಅಂಬೋಣ.

ತೀವ್ರ ಸಮಸ್ಯೆ 

ಹೀಗೆ, ಏಕಾಏಕಿ ಅನುದಾನವನ್ನು ವಾಪಸ್‌ ಪಡೆಯುತ್ತಿರುವುದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ತೀವ್ರ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಗಳು ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಕೆಲಸವನ್ನು ಕೈಗೆತ್ತಿಕೊಂಡಿದ್ದು, ಈ ಮೊದಲು ವಿಧಾನಸಭಾ ಚುನಾವಣೆ ಹಾಗೂ ವಿಧಾನಪರಿಷತ್‌ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆ ಅಡ್ಡಿಯಾಗಿ ಹಣ ಬಳಕೆಗೆ ತೊಂದರೆಯಾಯಿತು. ಈಗ ಅದೇ ಹಣವನ್ನು ಬಳಕೆ ಮಾಡಿಕೊಂಡು, ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ವೇಳೆಯಲ್ಲಿ ಅನುದಾನ ವಾಪಸಾಗುತ್ತಿರುವುದು ತೀವ್ರ ಸಮಸ್ಯೆಗೆ ಕಾರಣವಾಗಿದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಗಳು ನೀಡುವ ವಿವರಣೆಯಾಗಿದೆ.

ಬಂದಿಲ್ಲ ನಯಾಪೈಸೆ 

ಅಚ್ಚರಿ ಎಂದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲಾಖೆಗಳಿಗೆ ಇದುವರೆಗೂ ನಯಾಪೈಸೆ ಬಂದಿಲ್ಲ. ಹೊಸ ಯೋಜನೆಗಳನ್ನು ರೂಪಿಸುವ ಕುರಿತು ತಯಾರಿ ಮಾಡಿಕೊಳ್ಳುವುದಕ್ಕೂ ಅವಕಾಶ ಇಲ್ಲ. ಹೀಗಾಗಿ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ಪ್ರಗತಿ ಕಾಮಗಾರಿಗಳು ನಿಂತ ನೀರಾಗಿವೆ ಎನ್ನಲಾಗಿದೆ. 

ವರದಿ: ಸೋಮರೆಡ್ಡಿ ಅಳವಂಡಿ 

Follow Us:
Download App:
  • android
  • ios