ಬೆಂಗಳೂರು (ಸೆ. 1):  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ‘ಆರೆಂಜ್‌ ಅಲರ್ಟ್‌’ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಸರಣಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಮುಂದಿನ ನಾಲ್ಕು ದಿನ (ಸೆ.4 ವರೆಗೆ) ಉಡುಪಿ, ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ 115 ಮಿ.ಮೀ.ನಿಂದ 205 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ.

ಉಳಿದಂತೆ ಮುಂದಿನ 24 ಗಂಟೆಯಲ್ಲಿ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು, ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 65 ರಿಂದ 115 ಮಿ.ಮೀ.ವರೆಗೆ ಮಳೆಯಾಗುವ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಉಳಿದ ಕಡೆ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗಲಿದೆ. ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ದಕ್ಷಿಣದಲ್ಲಿ ಸೆ.3ರಿಂದ ಮಳೆ:

ಪ್ರಸ್ತುತ ಉಂಟಾಗಿರುವ ವಾಯುಭಾರ ಕುಸಿತದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಸೆ.3ರಿಂದ ಮತ್ತೊಂದು ವಾಯುಭಾರ ಕುಸಿತ ಬಂಗಾಳ ಕೊಲ್ಲಿಯಲ್ಲಿ ಉಂಟಾಗಲಿದೆ. ಅದರ ಪರಿಣಾಮವಾಗಿ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸೆ.3 ರಿಂದ 5ರವರೆಗೆ ಉತ್ತಮ ಮಳೆಯಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅತಿ ಹೆಚ್ಚು ಮಳೆ:

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉತ್ತರ ಕನ್ನಡದ ಮಂಕಿಯಲ್ಲಿ ಅತಿ ಹೆಚ್ಚು 24 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ಉತ್ತರಕನ್ನಡದ ಭಟ್ಕಳದಲ್ಲಿ 16, ಗೇರುಸೊಪ್ಪದಲ್ಲಿ 13, ಶಿರಾಲಿ, ಕಾರವಾರದಲ್ಲಿ ತಲಾ 10, ಹೊನ್ನಾವರ 9, ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಅಂಕೋಲದಲ್ಲಿ ತಲಾ 8, ಉತ್ತರ ಕನ್ನಡದ ಕುಮಟಾ, ಕದ್ರಾದಲ್ಲಿ ತಲಾ 7, ಶಿವಮೊಗ್ಗದ ಸಾಗರದಲ್ಲಿ 4, ದಕ್ಷಿಣ ಕನ್ನಡದ ಮಂಗಳೂರು, ಬೆಳಗಾವಿಯ ಗೋಕಾಕ್‌ನಲ್ಲಿ ತಲಾ 3 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.