ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಡುವಿನ ಅಧಿಕಾರ ಯುದ್ಧದಲ್ಲಿ ಕೊನೆಗೂ ಚಿನ್ನಮ್ಮನೇ ಗೆಲುವು ಸಾಧಿಸಿದ್ದಾರೆ. ಶಪಥಗೈದಂತೆ ಪನ್ನೀರ್ ಸೆಲ್ವಂಗೆ ಅಧಿಕಾರ ಸಿಗದ ಹಾಗೆ ಶಶಿಕಲಾ ಜೈಲಿನಲ್ಲೇ ಕೂತು ತಮ್ಮ ಆಪ್ತ ಎಡಪ್ಪಾಡಿ ಪಳನಿಸ್ವಾಮಿಯನ್ನು ನೂತನ ಸಿಎಂರನ್ನಾಗಿ ಮಾಡಿದ್ದಾರೆ. ಸೋಲಾದರೂ ಧೃತಿಗೆಡದ ಪನ್ನೀರ್ ಸೆಲ್ವಂ ಜಯಲಲಿತಾ ಆಡಳಿತವನ್ನು ಪುನರ್ ಸ್ಥಾಪಿಸುವುದಾಗಿ ಶಶಿಕಲಾ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ
ಚೆನ್ನೈ (ಫೆ.16): ತಮಿಳುನಾಡಿನ 12ನೇ ಸಿಎಂ ಆಗಿ ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಸಹಜವಾಗಿಯೇ ಓ. ಪನ್ನೀರ್ ಸೆಲ್ವಂಗೆ ಭಾರೀ ಹಿನ್ನಡೆಯಾಗಿದೆ. ಆದರೆ ಸೋಲನ್ನು ಒಪ್ಪಿಕೊಳ್ಳಲು ಒಪಿಎಸ್ ತಯಾರಿಲ್ಲ, ಹೀಗಾಗಿಯೇ ಮತ್ತೊಂದು ರಾಜಕೀಯ ಯುದ್ಧಕ್ಕೆ ಪನ್ನೀರ್ ಕಹಳೆ ಮೊಳಗಿಸಿದ್ದಾರೆ.
ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಡುವಿನ ಅಧಿಕಾರ ಯುದ್ಧದಲ್ಲಿ ಕೊನೆಗೂ ಚಿನ್ನಮ್ಮನೇ ಗೆಲುವು ಸಾಧಿಸಿದ್ದಾರೆ. ಶಪಥಗೈದಂತೆ ಪನ್ನೀರ್ ಸೆಲ್ವಂಗೆ ಅಧಿಕಾರ ಸಿಗದ ಹಾಗೆ ಶಶಿಕಲಾ ಜೈಲಿನಲ್ಲೇ ಕೂತು ತಮ್ಮ ಆಪ್ತ ಎಡಪ್ಪಾಡಿ ಪಳನಿಸ್ವಾಮಿಯನ್ನು ನೂತನ ಸಿಎಂರನ್ನಾಗಿ ಮಾಡಿದ್ದಾರೆ. ಸೋಲಾದರೂ ಧೃತಿಗೆಡದ ಪನ್ನೀರ್ ಸೆಲ್ವಂ ಜಯಲಲಿತಾ ಆಡಳಿತವನ್ನು ಪುನರ್ ಸ್ಥಾಪಿಸುವುದಾಗಿ ಶಶಿಕಲಾ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ.
ಕೆಲವೇ ಕೆಲವು ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಸಾಧ್ಯವೇ ಅನ್ನೋ ಎಲ್ಲರ ಲೆಕ್ಕಾಚಾರವನ್ನು ಪನ್ನೀರ್ ಸೆಲ್ವಂ ತಲೆಕೆಳಗೆ ಮಾಡಲು ಹೊರಟಿದ್ದಾರೆ. ಸದ್ಯಕ್ಕೆ ಹೊಸ ಸರ್ಕಾರ ರಚನೆ ಸಾಧ್ಯ ಇಲ್ಲ ಅನ್ನೋದನ್ನು ಪನ್ನೀರ್ಗೆ ಬೆಂಬಲ ನೀಡಿರುವ ಶಾಸಕರೂ ಅರಿತ್ತಿದ್ದರೂ ಅಮ್ಮನ ಆಶಯದಂತೆ ತಾನೇ ಅಧಿಕಾರ ನಡೆಸ್ತೀವಿ ಎಂದು ಪನ್ನೀರ್ ಗುಡುಗುತ್ತಿದ್ದಾರೆ.
ಜಯಲಲಿತಾ ಸಿಎಂ ಆಗಿದ್ದ ಕಾಲದಿಂದಲೂ ಪ್ರಧಾನಿ ಮೋದಿ ತಮಿಳುನಾಡಿಗೆ ಸಕಲ ಸವಲತ್ತುಗಳನ್ನು ಕರುಣಿಸಿದ್ದಾರೆ. ಪನ್ನೀರ್ ಸೆಲ್ವಂ ಜಯಲಲಿತಾ ಆಪ್ತ ಎಂಬ ವಿಚಾರವನ್ನು ಮೋದಿ ಅರಿತಿದ್ದಾರೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿರುವ ಪ್ರಧಾನಿ ಮೋದಿ , ಕೇಂದ್ರ ಸಚಿವರಾದ ಅರುಣ್ಜೇಟ್ಲಿ ಮತ್ತು ವೆಂಕಯ್ಯನಾಯ್ಡು ಅವರನ್ನು ಪನ್ನೀರ್ ಸೆಲ್ವಂಗೆ ಬೆಂಬಲವಾಗಿ ನಿಲ್ಲುವಂತೆ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಪನ್ನೀರ್ ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದಾರೆ.
ಬಿಜೆಪಿ ಬೆಂಬಲದ ಹಿಂದೆಯೂ ಪೊಲಿಟಿಕಲ್ ಗೇಮ್ ಇದೆ. ತಮಿಳುನಾಡಿನಲ್ಲಿ ಆರಂಭದಿಂದಲೂ ಪ್ರದೇಶಿಕ ಪಕ್ಷಗಳು ಆಳ್ವಿಕೆ ನಡೆಯುತ್ತಿದೆ. ಈ ಪರ್ವವನ್ನು ಅಂತ್ಯಗೊಳಿಸಿ ರಾಷ್ಟ್ರೀಯ ಪಕ್ಷವನ್ನು ತಮಿಳುನಾಡಿನಲ್ಲಿ ಸ್ಥಾಪಿಸುವುದು ಮೋದಿ ಅಂಡ್ ಟೀಮ್ ಯೋಜನೆ. ಈ ಕಾರಣದಿಂದಲೇ ಪನ್ನೀರ್ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸಚಿವರ ಬೆಂಬಲದಿಂದಲೇ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ಮತ್ತೆ ತೊಡೆ ತಟ್ಟಿದ್ದಾರೆ. ಇನ್ನು ಪನ್ನೀರ್ ಸೆಲ್ವಂ ಸಿಎಂ ಆಗುವ ಕನಸಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಸಹ ಅವಕಾಶವೊಂದನ್ನು ನೀಡಿದ್ದಾರೆ.
‘15ದಿನದೊಳಗೆ ಬಹುಮತ ಸಾಬೀತುಪಡಿಸಿ’
ಪಳನಿಸ್ವಾಮಿ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಆದರೆ ಎಡಪ್ಪಾಡಿ ಪಳನಿಸ್ವಾಮಿ 15 ದಿನದೊಳಗೆ ಬಹುಮತ ಸಾಬೀತುಪಡಿಸಬೇಕಿದೆ. ಇದೇ ಆಧಾರದ ಮೇಲೆ ಈಗ ಪ್ನನೀರ್ ಸೆಲ್ವಂ ಮತ್ತೆ ಆಟ ಶುರು ಮಾಡಿದ್ದಾರೆ.
ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್?
ತಮಿಳುನಾಡು ವಿಧಾನಸಭೆ ಬಲಾಬಲ 234
ಸರ್ಕಾರದ ಬಹುಮತಕ್ಕೆ 117 ಸದಸ್ಯ ಬಲ ಬೇಕು
ಪಳನಿಸ್ವಾಮಿ ಪರ ಶಾಸಕರ ಸಂಖ್ಯೆ 123
ಪನ್ನೀರ್ ಸೆಲ್ವಂ ಪರ ಶಾಸಕರ ಸಂಖ್ಯೆ 10
ಆದರೆ ಈಗಿರುವ ಪನ್ನೀರ್ ಬೆಂಬಲಿಗರ ಸಂಖ್ಯೆ ಇನ್ನೆರಡು ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಶಶಿಕಲಾ ಬಣದ 30ಕ್ಕೂ ಹೆಚ್ಚು ಶಾಸಕರು ಪನ್ನೀರ್ ಕ್ಯಾಂಪ್'ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಇದೇ ಭರವಸೆಯಿಂದ ಪನ್ನೀರ್ ಸೆಲ್ವಂಗೆ ಅಧಿಕಾರದ ಕನಸು ಚಿಗುರೊಡೆದಿದೆ. ಒಟ್ಟಿನಲ್ಲಿ ಬಿಜೆಪಿಯ ಬೆಂಬಲ ಹಾಗೂ ರಾಜ್ಯಪಾಲರು ಬಹುಮತ ಸಾಬೀತಿಗೆ ನೀಡಿರುವ ಸೂಚನೆ ಪನ್ನೀರ್ ಸೆಲ್ವಂಗೆ ಲಾಭವಾಗಿ ಪರಿಣಮಿಸುವುದೇ ಎಂದು ಕಾದುನೋಡಬೇಕಿದೆ.
