ಅವಧಿಪೂರ್ವ ಚುನಾವಣೆಗೆ ಪ್ರತಿಪಕ್ಷಗಳ ರಣತಂತ್ರ

First Published 7, Apr 2018, 7:26 AM IST
Opposition Parties Plan To Lok Sabha Election
Highlights

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕಟ್ಟಿಹಾಕಲು ತೃತೀಯ ರಂಗ ರಚನೆಗೆ ಯತ್ನಿಸುತ್ತಿದ್ದ ವಿಪಕ್ಷಗಳು, ಇದೀಗ ಇದ್ದಕ್ಕಿದ್ದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎದ್ದಿದೆ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ಅವಧಿಪೂರ್ವ ಚುನಾವಣೆ ಎದುರಿಸಲು ಸಜ್ಜಾಗಿವೆ.

ನವದೆಹಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕಟ್ಟಿಹಾಕಲು ತೃತೀಯ ರಂಗ ರಚನೆಗೆ ಯತ್ನಿಸುತ್ತಿದ್ದ ವಿಪಕ್ಷಗಳು, ಇದೀಗ ಇದ್ದಕ್ಕಿದ್ದಂತೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎದ್ದಿದೆ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ಅವಧಿಪೂರ್ವ ಚುನಾವಣೆ ಎದುರಿಸಲು ಸಜ್ಜಾಗಿವೆ.

ಹೀಗಾಗಿ ಅವಧಿಪೂರ್ವ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕನಿಷ್ಠ 100 ಸಂಸದರ ಸಾಮೂಹಿಕ ರಾಜೀನಾಮೆಗೆ ವಿಪಕ್ಷಗಳು ರಹಸ್ಯವಾಗಿ ಕಾರ್ಯತಂತ್ರ ರೂಪಿಸುತ್ತಿವೆ ಎಂದು ಹೇಳಲಾಗಿದೆ.

ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದಿಂದಾಗಿ ಯಾವುದೇ ಕಲಾಪ ನಡೆಯದೇ ಕಗ್ಗಂಟು ಸೃಷ್ಟಿಯಾಗಿರುವ ಬೆನ್ನಲ್ಲೇ, ನಡೆದಿರುವ ಈ ಮಹತ್ವದ ರಾಜಕೀಯ ಬೆಳವಣಿಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ‘ರಿಪಬ್ಲಿಕ್‌’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.

ಮೋದಿ ವಿರೋಧಿ ಅಲೆ?: ಇತ್ತೀಚಿನ ದಿನಗಳಲ್ಲಿ ಸಂಸತ್ತಿನ ಒಳಗೂ ಹೊರಗೂ ಭಾರೀ ಗದ್ದಲಕ್ಕೆ ಕಾರಣವಾದ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದ, ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಳಂಬ ವಿವಾದ, ಎಸ್‌ಸಿ/ ಎಸ್‌ಟಿ ಕಾಯ್ದೆ ದುರ್ಬಳಕೆ ಕುರಿತು ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶ, ಪಿಎನ್‌ಬಿ ಹಗರಣ, ತೈಲ ಬೆಲೆ ಏರಿಕೆ, ಉದ್ಯೋಗ ಸೃಷ್ಟಿಯಲ್ಲಿ ವಿಫಲ ಮೊದಲಾದ ವಿಷಯಗಳು ದೇಶಾದ್ಯಂತ ಮೋದಿ ವಿರೋಧಿ ಅಲೆ ಹುಟ್ಟುಹಾಕಿದೆ ಎಂಬ ಭಾವನೆ ವಿಪಕ್ಷಗಳಲ್ಲಿ ಮೂಡಿದೆ. ಇದರ ಜೊತೆಗೆ ಇತ್ತೀಚೆಗೆ ಪ್ರಟಕವಾದ ಕೆಲ ರಾಜ್ಯಗಳ ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳು ತಮ್ಮ ಪರವಾಗಿದೆ ಎಂಬುದು ವಿಪಕ್ಷಗಳವಾದ.

ಹೀಗಾಗಿ ಈ ಪರಿಸ್ಥಿತಿಯ ಲಾಭ ಪಡೆಯುವ ನಿಟ್ಟಿನಲ್ಲಿ ಈಗಲೇ ಲೋಕಸಭಾ ಚುನಾವಣೆ ನಡೆದರೆ, ಮೋದಿ ನೇತೃತ್ವದ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟವನ್ನು ಕಟ್ಟಿಹಾಕುವುದು ಸುಲಭ ಎಂಬ ನಿರ್ಧಾರಕ್ಕೆ ಕೆಲ ವಿಪಕ್ಷಗಳ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ 2019ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯನ್ನು ಅವಧಿಪೂರ್ವವಾಗಿಯೇ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಸಂಸದರ ಸಾಮೂಹಿಕ ರಾಜೀನಾಮೆ ತಂತ್ರವೊಂದನ್ನು ಹಣೆಯಲಾಗಿದೆ. ಕೆಲ ಕಾಂಗ್ರೆಸ್‌ ನಾಯಕರು, ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತು ಎನ್‌ಸಿಪಿಯ ಶರದ್‌ ಪವಾರ್‌ ನೇತೃತ್ವದಲ್ಲಿ ಇಂಥದ್ದೊಂದು ತಂತ್ರವನ್ನು ಹೆಣೆಯಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿ ವರದಿ ಮಾಡಿದೆ.

ಈ ವಾರ 2 ದಿನಗಳ ದೆಹಲಿ ಪ್ರವಾಸದ ವೇಳೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ ಮುಖಂಡರು ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಜೊತೆ ಸಮಾಲೋಚನೆ ನಡೆಸಿದ್ದು, ಸಾಮೂಹಿಕ ರಾಜೀನಾಮೆಯ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಮೋದಿ ವರ್ಸಸ್‌ ವಿಪಕ್ಷ: ಮುಂದಿನ ಲೋಕಸಭೆ ಚುನಾವಣೆಯನ್ನು ಮೋದಿ ವಿರುದ್ಧ ಎಲ್ಲಾ ಪ್ರತಿಪಕ್ಷಗಳ ಹೋರಾಟ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ಮೋದಿಯನ್ನು ಚುನಾವಣೆಯಲ್ಲಿ ಮಣಿಸಲು ಪ್ರತಿಪಕ್ಷಗಳು ತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟುಗೂಡುವ ಬಗ್ಗೆ ಈಗಾಗಲೇ ಸುಳಿವು ನೀಡಿವೆ. ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ವಿಫಲವಾದ ಬಳಿಕ ಇದೀಗ ಸಾಮೂಹಿಕ ರಾಜೀನಾಮೆಯ ತಂತ್ರ ಹೆಣೆದಿವೆ ಎನ್ನಲಾಗುತ್ತಿದೆ.

100ಕ್ಕೂ ಹೆಚ್ಚು ಲೋಕಸಭಾ ಸದಸ್ಯರ ರಾಜೀನಾಮೆ ಕೊಡಿಸುವುದು, ಅವಧಿಪೂರ್ವ ಚುನಾವಣೆಗೆ ಒತ್ತಡ ಹೇರುವುದು. ಹಾಗೆ, ಬೇಗ ಚುನಾವಣೆ ನಡೆದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದ ವಿವಾದ, ಪಿಎನ್‌ಬಿ ಹಗರಣ, ಎಸ್‌ಸಿ/ಎಸ್‌ಟಿ ಕಾಯ್ದೆ ಕುರಿತ ಸುಪ್ರೀಂ ತೀರ್ಪು, ಕಾವೇರಿ ನಿರ್ವಹಣಾ ಮಂಡಳಿ ರಚನೆ, ತೈಲ ಬೆಲೆ ಏರಿಕೆ ಮತ್ತಿತರ ಅಂಶಗಳನ್ನು ಎತ್ತಿ ಮೋದಿ ಮುಂದಾಳತ್ವದ ಎನ್‌ಡಿಎ ವಿರೋಧಿ ಎಲೆ ಎಬ್ಬಿಸಿ ಚುನಾವಣೆ ಗೆಲ್ಲಲು ತಂತ್ರಗಾರಿಕೆ ನಡೆದಿದೆ ಎಂದು ‘ರಿಪಬ್ಲಿಕ್‌’ ಇಂಗ್ಲಿಷ್‌ ಸುದ್ದಿವಾಹಿನಿ ವರದಿ ಮಾಡಿದೆ.

loader