ನವದೆಹಲಿ (ಅ.06): ಭಾರತೀಯ ಸೇನೆಯು ನಡೆಸಿರುವ ಸರ್ಜಿಕಲ್ ದಾಳಿಯ ವಿಡಿಯೋವನ್ನು ಬಹಿರಂಗಪಡಿಸುವುದಕ್ಕೆ ಎನ್’ಸಿಪಿ ವಿರೋಧ ವ್ಯಕ್ತಪಡಿಸಿದೆ.

ಭಾರತೀಯ ಸೇನೆಯು ಕಾರ್ಯಾಚರಿಸುವ ರೀತಿಯನ್ನು ಬಹಿರಂಗಪಡಿಸುವುದು ದೇಶದ ಸುಭದ್ರತೆಗೆ ಮಾರಕವಾಗಬಹುದು ಎಂದಿರುವ ಎನ್’ಸಿಪಿ ನಾಯಕ ಮಜೀದ್ ಮೆಮನ್, ಸರ್ಜಿಕಲ್ ದಾಳಿ ಬಗ್ಗೆ ಎತ್ತಲಾಗುತ್ತಿರುವ ಪ್ರಶ್ನೆಗಳನ್ನು ನಿರ್ಲಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸೇನಾ ಕಾರ್ಯಾಚರಣೆಯು ಗೋಪ್ಯವಾದದ್ದು ಹಾಗೂ ಅದನ್ನು ಬಹಿರಂಗಗೊಳಿಸುವುದು ಹಾನಿಕಾರಕವಾಗಬಹುದು. ಕೇಂದ್ರ ಸರ್ಕಾರವು ಅದನ್ನು ಬಹಿರಂಗಗೊಳಿಸಿದರೆ, ಅದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗುವುದು, ಎಂದು ಮೆಮನ್ ಹೇಳಿದ್ದಾರೆ.

ಸರ್ಜಿಕಲ್ ದಾಳಿ ಬಗ್ಗೆ ಕೇಳಲಾಗುತ್ತಿರುವ ಪ್ರಶ್ನೆಗಳನ್ನು ಉಪೇಕ್ಷಿಸಿ. ಇಲ್ಲವಾದರೆ ಭವಿಷ್ಯದ ಕಾರ್ಯಾಚರಣೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.