ರಾಷ್ಟ್ರದಲ್ಲಿ ಜಾತಿ, ಧರ್ಮ, ಮತ ಮತ್ತು ವರ್ಣದ ಆಧಾರದಲ್ಲಿ ಯಾವುದೇ ತಾರತಮ್ಯವಿಲ್ಲ. ವಿಜಯ್‌ ತಮ್ಮ ಮಾತಿಗೆ ಕ್ಷಮೆ ಕೋರಿದ್ದಾರೆ ಎಂಬುದಾಗಿ ಸರ್ಕಾರದ ಪರವಾಗಿ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಅನಂತಕುಮಾರ್‌ ಸ್ಪಷ್ಟನೆ ನೀಡಿದ ಹೊರತಾಗಿಯೂ ತರುಣ್‌ ವಿಜಯ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು.
ನವದೆಹಲಿ: ನೋಯ್ಡಾದಲ್ಲಿ ಆಫ್ರಿಕಾ ವಿದ್ಯಾರ್ಥಿಗಳ ಮೇಲಿನ ಹಲ್ಲೆಯು ಜನಾಂಗೀಯ ದಾಳಿಯಲ್ಲ ಎಂಬುದನ್ನು ಸಮರ್ಥಿಸುವ ಭರದಲ್ಲಿ ಬಿಜೆಪಿ ನಾಯಕ ತರುಣ್ ವಿಜಯ್ ಅವರು ‘ದಕ್ಷಿಣ ಭಾರತೀ ಯರು ಕರಿಯರು' ಎಂದು ನೀಡಿದ ವಿವಾದಾತ್ಮಕ ಹೇಳಿಕೆ ಮಂಗಳವಾರ ಲೋಕಸಭಾ ಕಲಾಪದಲ್ಲೂ ಪ್ರತಿಧ್ವನಿಸಿದೆ.
ರಾಷ್ಟ್ರದಲ್ಲಿ ಜಾತಿ, ಧರ್ಮ, ಮತ ಮತ್ತು ವರ್ಣದ ಆಧಾರದಲ್ಲಿ ಯಾವುದೇ ತಾರತಮ್ಯವಿಲ್ಲ. ವಿಜಯ್ ತಮ್ಮ ಮಾತಿಗೆ ಕ್ಷಮೆ ಕೋರಿದ್ದಾರೆ ಎಂಬುದಾಗಿ ಸರ್ಕಾರದ ಪರವಾಗಿ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅನಂತಕುಮಾರ್ ಸ್ಪಷ್ಟನೆ ನೀಡಿದ ಹೊರತಾಗಿಯೂ ತರುಣ್ ವಿಜಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು. ಇದರಿಂದಾಗಿ ಒಂದು ಬಾರಿ ಪ್ರಶ್ನೋತ್ತರ ವೇಳೆ ಮತ್ತು ಎರಡು ಬಾರಿ ಶೂನ್ಯ ವೇಳೆಯಲ್ಲಿ ಕಲಾಪವನ್ನು ಮುಂದೂಡಬೇಕಾಯಿತು.
ಈ ಬಗ್ಗೆ ಲೋಕಸಭೆಯಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ,‘ದಕ್ಷಿಣ ಭಾರತೀಯರು ಯಾರೂ ಭಾರತೀಯ ನಾಗರಿಕರಲ್ಲವೇ? ವಿಜಯ್ ಮೇಲೇಕೆ ಬಿಜೆಪಿ ಕಠಿಣ ಕ್ರಮ ಜರುಗಿಸಿಲ್ಲ' ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಅಲ್ಲದೆ, ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿ, ‘ನಾವು ಭಾರತೀಯರು ಹೌದೇ ಅಲ್ಲವೇ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ನಾವು ಭಾರತೀಯರಲ್ಲವೇ' ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ತರುಣ್ ಸಾಮಾನ್ಯ ವ್ಯಕ್ತಿಯಲ್ಲ. ಅವರು ಮಾಜಿ ರಾಜ್ಯಸಭಾ ಸದಸ್ಯರು ಮತ್ತು ಬಿಜೆಪಿ ತತ್ವದ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ರಾಷ್ಟ್ರ ವಿಭಜನೆಗೆ ಕುಮ್ಮಕ್ಕು ನೀಡುವಂಥ ಹೇಳಿಕೆ ನೀಡಿದ ತರುಣ್ ವಿಜಯ್ ಹೇಳಿಕೆ ದೇಶದ್ರೋಹವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಖರ್ಗೆ ಆಗ್ರಹಿಸಿದರು.
