ಲೋಕಸಭಾ ಚುನಾವಣೆ : ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್‌

Opposition comes up with 'Plan 400' to defeat BJP in 2019
Highlights

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಶತಾಯಗತಾಯ ತಪ್ಪಿಸಲೇಬೇಕೆಂಬ ಉದ್ದೇಶದಿಂದ ಕರ್ನಾಟಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್‌, ಅದೇ ಮಾದರಿಯ ತಂತ್ರಗಾರಿಕೆಯನ್ನು ಲೋಕಸಭೆ ಚುನಾವಣೆಗೂ ವಿಸ್ತರಿಸಲು ಮುಂದಾಗಿದೆ

ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಶತಾಯಗತಾಯ ತಪ್ಪಿಸಲೇಬೇಕೆಂಬ ಉದ್ದೇಶದಿಂದ ಕರ್ನಾಟಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದ ಕಾಂಗ್ರೆಸ್‌, ಅದೇ ಮಾದರಿಯ ತಂತ್ರಗಾರಿಕೆಯನ್ನು ಲೋಕಸಭೆ ಚುನಾವಣೆಗೂ ವಿಸ್ತರಿಸಲು ಮುಂದಾಗಿದೆ. ಲೋಕಸಭೆಯ ಒಟ್ಟು ಬಲದ ಪೈಕಿ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟು, ಕೇವಲ 250 ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರವೇ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟುಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್‌ ಎಂದಿಗೂ ಸ್ಪರ್ಧಿಸಿರಲಿಲ್ಲ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬ ನಿಲುವಿಗೆ ಬಂದಿರುವ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ‘ಮಹಾಘಟಬಂಧನ’ ರೂಪಿಸುತ್ತಿದೆ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಲುವಾಗಿ, ತಾನು ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಲು ಉದ್ದೇಶಿಸಿದೆ. ಅಲ್ಲದೆ, ಶುದ್ಧಹಸ್ತರಾಗಿರುವ ಹಾಗೂ ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಮಾತ್ರವೇ ಕಣಕ್ಕೆ ಇಳಿಸಬೇಕು ಎಂಬ ಚಿಂತನೆ. ಹೀಗಾಗಿ ಕಳೆದ ಬಾರಿ ಕಾಂಗ್ರೆಸ್‌ ಗೆದ್ದಿದ್ದ 44 ಕ್ಷೇತ್ರಗಳನ್ನು ಯಾರಿಗೂ ಬಿಟ್ಟುಕೊಡುವ ಸಾಧ್ಯತೆ ಇಲ್ಲ ಎಂದು ‘ಝೀ ನ್ಯೂಸ್‌’ ವರದಿ ಹೇಳಿದೆ.

2019ರ ಲೋಕಸಭೆ ಚುನಾವಣೆಯ ಸ್ಥಾನ ಹೊಂದಾಣಿಕೆ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಮಾರ್ಗಸೂಚಿಯೊಂದನ್ನು ಸಿದ್ಧಪಡಿಸುವಂತೆ ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆ್ಯಂಟನಿ ಸಮಿತಿಗೆ ಸೂಚಿಸಲಾಗಿದೆ. ಈ ಸಂಬಂಧ ಸಮಿತಿ ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಿಂದ ಅಭಿಪ್ರಾಯ ಕೇಳಿದೆ. ಈ ಘಟಕಗಳು ಹಾಗೂ ಪದಾಧಿಕಾರಿಗಳು ಮತ್ತು ರಾಹುಲ್‌ ಗಾಂಧಿ ಅವರ ಜತೆ ಚರ್ಚಿಸಿ ಆ್ಯಂಟನಿ ಸಮಿತಿ 2019ರ ಲೋಕಸಭೆ ಚುನಾವಣೆ ಯೋಜನೆಯನ್ನು ಅಂತಿಮಗೊಳಿಸಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗುವ ರಾಜ್ಯಗಳಲ್ಲಿ ತನ್ನ ತಂತ್ರಗಾರಿಕೆ ಪರಿಷ್ಕರಿಸಲು ಕಾಂಗ್ರೆಸ್‌ ಉದ್ದೇಶಿಸಿದೆ. ಬಿಜೆಪಿಗೆ ಹೊಡೆತ ನೀಡಲು ಬೂತ್‌ ಮಟ್ಟದ ಕಾರ್ಯಕರ್ತರನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ ಎಂದು ವರದಿ ತಿಳಿಸಿದೆ.

loader