ಸರ್ಕಾರ ಉರುಳಿಸುವ ಆಪರೇಷನ್‌ ಕಮಲದ ‘ಕಿಂಗ್‌ಪಿನ್‌’ಗಳ ಪೈಕಿ ಒಬ್ಬಾತ ಎಂಬ ಆರೋಪ ಹೊತ್ತಿರುವ  ಒಬ್ಬಾತ ಮಂಗಳವಾರ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಸಂಗತಿಗೆ ಬೆಳಕಿಗೆ ಬಂದಿದೆ.

ಬೆಂಗಳೂರು : ಪೊಲೀಸರ ಕಾರ್ಯಾಚರಣೆ ಚುರುಕುಗೊಂಡ ಬೆನ್ನಲ್ಲೇ ಸರ್ಕಾರ ಉರುಳಿಸುವ ಆಪರೇಷನ್‌ ಕಮಲದ ‘ಕಿಂಗ್‌ಪಿನ್‌’ಗಳ ಪೈಕಿ ಒಬ್ಬಾತ ಎಂಬ ಆರೋಪ ಹೊತ್ತಿರುವ ಗುತ್ತಿಗೆದಾರ ಉದಯ್‌ಗೌಡ ಅಲಿಯಾಸ್‌ ಕ್ಲಬ್‌ ಉದಯ್‌ ಮಂಗಳವಾರ ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಸಂಗತಿಗೆ ಬೆಳಕಿಗೆ ಬಂದಿದೆ.

ಕಿಂಗ್‌ಪಿನ್‌ ವಿರುದ್ಧ ದಾಖಲಾಗಿದ್ದ ಹಳೆ ಪ್ರಕರಣವನ್ನು ಕೆದಕಿದ ಪೊಲೀಸರು, ಉದಯ್‌ ಹಾಗೂ ಆತನ ಸ್ನೇಹಿತ ನಾಯ್ಡು ಮನೆ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಕಾರ್ಯಾಚರಣೆಯ ಮಾಹಿತಿ ಪಡೆದ ಉದಯ್‌, ಬಂಧನ ಭೀತಿಯಿಂದ ರಾತ್ರಿ ಶ್ರೀಲಂಕಾಕ್ಕೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.

ಮನೆ ಮೇಲೆ ದಾಳಿ ನಡೆದಾಗ ಉದಯ್‌ ಇರಲಿಲ್ಲ. ಆಗ ಆತನ ಇರುವಿಕೆ ಕುರಿತು ಮಾಹಿತಿ ಕಲೆ ಹಾಕಿದಾಗ ಶ್ರೀಲಂಕಾಕ್ಕೆ ಹೋಗಿರುವ ವಿಚಾರ ಗೊತ್ತಾಯಿತು. ಈಗ ಆತನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ತಮ್ಮ ಸರ್ಕಾರ ಪತನಗೊಳಿಸಲು ಬಿಜೆಪಿ ನಾಯಕರ ಇಶಾರೆ ಮೇರೆಗೆ ನಾಲ್ವರು ಕಿಂಗ್‌ಪಿನ್‌ಗಳು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಆ ನಾಲ್ವರು ಕಿಂಗ್‌ಪಿನ್‌ಗಳ ಪೈಕಿ ಇಸ್ಪೀಟ್‌ ಆಡಿಸುವ ಆಪಾದನೆಗೆ ತುತ್ತಾಗಿದ್ದ ಗುತ್ತಿಗೆದಾರ ಉದಯ್‌ ಕೂಡ ಒಬ್ಬ ಎನ್ನಲಾಗಿತ್ತು. ಇತ್ತ ಸರ್ಕಾರ ಉರುಳಿಸಲು ಯತ್ನಿಸಿದವರನ್ನು ಬಗ್ಗು ಬಡಿಯಲು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು, ಉದಯ್‌ ವಿರುದ್ಧದ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿದ್ದರು ಎಂದು ಗೊತ್ತಾಗಿದೆ.