ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ?

First Published 5, Aug 2018, 10:45 AM IST
Open Book Examination System May Start In Karnataka
Highlights

ಪ್ರಾಥಮಿಕ ಶಾಲೆಗಳಲ್ಲಿ ಕಿರುಪರೀಕ್ಷೆಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಬರಲಿದೆಯೇ? ಶಿಕ್ಷಣ ಸಚಿವ ಎನ್.ಮಹೇಶ್ ಅವರು ಈ ಸಂಬಂಧ ಮತ್ತೆ ಮತ್ತೆ ನೀಡುತ್ತಿರುವ ಹೇಳಿಕೆಗಳು ಇಂಥದ್ದೊಂದು ಅನುಮಾನ ಹುಟ್ಟಲು ಕಾರಣವಾಗಿದೆ.

ಬೆಂಗಳೂರು : ಪ್ರಾಥಮಿಕ ಶಾಲೆಗಳಲ್ಲಿ ಕಿರುಪರೀಕ್ಷೆಗೆ ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಬರಲಿದೆಯೇ? ಶಿಕ್ಷಣ ಸಚಿವ ಎನ್.ಮಹೇಶ್ ಅವರು ಈ ಸಂಬಂಧ ಮತ್ತೆ ಮತ್ತೆ ನೀಡುತ್ತಿರುವ ಹೇಳಿಕೆಗಳು ಇಂಥದ್ದೊಂದು ಅನುಮಾನ ಹುಟ್ಟಲು ಕಾರಣವಾಗಿದೆ. ಇತ್ತೀಚೆಗಷ್ಟೇ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಓಪನ್ ಬುಕ್ ಎಕ್ಸಾಮ್ ಜಾರಿಗೆ ತರುವ ಆಲೋಚನೆ ಹರಿಯಬಿಟ್ಟಿದ್ದರು.

ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ಎದುರಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಘಟಕ ಹಾಗೂ ಅರ್ಧ ವಾರ್ಷಿಕ ಪರೀಕ್ಷೆಗೆ ಇಂಥದ್ದೊಂದು ಪರೀಕ್ಷಾ ಪದ್ಧತಿ ಅಳವಡಿಸುವ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿನ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಶನಿವಾರ ಏರ್ಪಡಿಸಿದ್ದ ‘100 ಶಾಲೆಗಳಿಗೆ-ನೂರು ನೂರು ಪುಸ್ತಕ ಯೋಜನೆ’ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಓಪನ್ ಬುಕ್ ಎಕ್ಸಾಮ್’ ಪದ್ಧತಿಯನ್ನು ಅಂತಿಮ ಪರೀಕ್ಷೆಗೆ ಅಳವಡಿಸಲು ನಮ್ಮ ಸಮಾಜದ ಮನಸ್ಥಿತಿ ಇನ್ನೂ ಒಗ್ಗಿಲ್ಲ. ಆದಕಾರಣ ಘಟಕ ಪರೀಕ್ಷೆ ಮತ್ತು ಅರ್ಧ ವಾರ್ಷಿಕ ಪರೀಕ್ಷೆಗೆ ಅನ್ವಯಿಸಿಕೊಳ್ಳಬಹುದು ಎಂದು ಸಲಹೆ ರೂಪದ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

‘ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿದಾಗ ಮಗುವೊಂದಕ್ಕೆ ಪ್ರಶ್ನೆ ಕೇಳಿದೆ, ಅದಕ್ಕೆ ಉತ್ತರ ಹೇಳಲು ಬರಲಿಲ್ಲ. ಪುಸ್ತಕ ನೋಡಿಯಾದರೂ ಹೇಳು ಎಂದರೆ ಹೇಳಲಿಲ್ಲ. ಶಿಕ್ಷಣದ ಸ್ಥಿತಿ ಹೀಗಿದೆ  ನೋಡಿ’ ಎಂದು ಬೇಸರ ವ್ಯಕ್ತಪಡಿಸಿದರು. ಆದ್ದರಿಂದ ಶಿಕ್ಷಕರೇ ಪಾಠ ಮುಗಿದ ತಕ್ಷಣ ಪ್ರಶ್ನೆಗಳನ್ನು ತಯಾರಿಸಿ ಮಕ್ಕಳಿಗೆ ನೀಡಿ, ಪುಸ್ತಕ ನೋಡಿ ಉತ್ತರಿಸುವಂತೆ ತಿಳಿಸಬೇಕು. ಆಗ ಮಗುವಿನಲ್ಲಿ ಕ್ರಿಯಾತ್ಮಕ ಚಟುವಟಿಕೆ, ಸೃಜನಶೀಲತೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಸಂಬಂಧ ಯಾರಿಂದಲೂ ಯಾವುದೇ ತಕರಾರು ವ್ಯಕ್ತವಾಗಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಕ್ಕೆ ಮಾತ್ರ ವಿರೋಧವಿದೆ ಎಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದರು.

loader