ಜೆಡಿಎಸ್‌ ತೊರೆಯಲು ಈಗ ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ ತುದಿಗಾಲಲ್ಲಿ ನಿಂತಿದ್ದಾರೆ. ಲಿಂಗಸುಗೂರು ಮೀಸಲು ಕೇತ್ರದ ಟಿಕೆಟ್‌ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಅವರು ಮಾತೃಪಕ್ಷಕ್ಕೆ ಗುಡ್‌ಬೈ ಹೇಳಲು ಸನ್ನದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ : ಜೆಡಿಎಸ್‌ ತೊರೆಯಲು ಈಗ ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ ತುದಿಗಾಲಲ್ಲಿ ನಿಂತಿದ್ದಾರೆ. ಲಿಂಗಸುಗೂರು ಮೀಸಲು ಕೇತ್ರದ ಟಿಕೆಟ್‌ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಅವರು ಮಾತೃಪಕ್ಷಕ್ಕೆ ಗುಡ್‌ಬೈ ಹೇಳಲು ಸನ್ನದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಧಾರವಾಡ ಮತ್ತು ರಾಯಚೂರಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿರುವ ಅಲ್ಕೋಡ್‌ ಹನುಮಂತಪ್ಪ, ಜೆಡಿಎಸ್‌ನ ಪರಮ ವೈರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜತೆಗೆ ಹುಬ್ಬಳ್ಳಿ ಅಥವಾ ಲಿಂಗಸುಗೂರಿನಿಂದ ಕಾಂಗ್ರೆಸ್‌ ಟಿಕೆಟ್‌ಗೆ ಬೇಡಿಕೆ ಇರಿಸಿದ್ದಾರೆ.

ಜೆಡಿಎಸ್‌ ಶಕ್ತಿ ಕುಂದಿಸುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ಕೂಡ ಅಲ್ಕೋಡ್‌ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಮೂಲಕ ವಿಧಾನಪರಿಷತ್‌ ಪ್ರವೇಶಿಸಿದ್ದ ಅಲ್ಕೋಡ್‌ ಬಳಿಕ ದೇವದುರ್ಗ ಮೀಸಲು ಕ್ಷೇತ್ರದಲ್ಲಿ ಗೆದ್ದು ಕ್ರೀಡಾ ಸಚಿವರಾಗಿದ್ದರು. ನಂತರ ಎರಡು ಸತತ ಸೋಲು ಉಂಡಿದ್ದಾರೆ. ಕಳೆದ ಬಾರಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯ ಸೋಲುಂಡಿದ್ದರೂ ಈ ಬಾರಿ ಮತ್ತೆ ಕಣಕ್ಕಿಳಿಯುವ ತಯಾರಿ ನಡೆಸಿದ್ದರು.

ಆರೋಗ್ಯ ಸಮಸ್ಯೆ ಇತ್ಯಾದಿ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಅಲ್ಕೋಡ್‌ ರಾಯಚೂರು ಜಿಲ್ಲೆಗೆ ಅಷ್ಟಕಷ್ಟೇ ಆಗಿದ್ದನ್ನು ಮನಗಂಡ ಜೆಡಿಎಸ್‌ ಹೈಕಮಾಂಡ್‌ ಲಿಂಗಸುಗೂರಿನ ಸ್ಥಳೀಯರಾದ ಸಿದ್ದು ಬಂಡಿ ಅವರಿಗೆ ಟಿಕೆಟ್‌ ಘೋಷಿಸಿತ್ತು. ಇದು ಅಲ್ಕೋಡ್‌ ಸಿಟ್ಟಿಗೆ ಕಾರಣ.