ಬೃಹತ್‌ ಬ್ಯಾಂಕಿಂಗ್‌ ಹಗರಣಗಳ ನಂತರ ಇದೀಗ ದೊಡ್ಡ ಮಟ್ಟದ ಟಿಡಿಎಸ್‌ ಹಗರಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದ್ದು, ಬೇರೆ ಬೇರೆ ಕ್ಷೇತ್ರದ ಉದ್ಯಮಿಗಳು ಒಟ್ಟಾರೆ ಸುಮಾರು 3200 ಕೋಟಿ ರು.ಗಳನ್ನು ಸರ್ಕಾರಕ್ಕೆ ವಂಚಿಸಿದ್ದಾರೆ.

ಮುಂಬೈ: ಬೃಹತ್‌ ಬ್ಯಾಂಕಿಂಗ್‌ ಹಗರಣಗಳ ನಂತರ ಇದೀಗ ದೊಡ್ಡ ಮಟ್ಟದ ಟಿಡಿಎಸ್‌ ಹಗರಣವನ್ನು ಆದಾಯ ತೆರಿಗೆ ಇಲಾಖೆ ಪತ್ತೆಹಚ್ಚಿದ್ದು, ಬೇರೆ ಬೇರೆ ಕ್ಷೇತ್ರದ ಉದ್ಯಮಿಗಳು ಒಟ್ಟಾರೆ ಸುಮಾರು 3200 ಕೋಟಿ ರು.ಗಳನ್ನು ಸರ್ಕಾರಕ್ಕೆ ವಂಚಿಸಿದ್ದಾರೆ.

ಒಟ್ಟು 447 ಕಂಪನಿಗಳು ತಮ್ಮ ನೌಕರರ ಸಂಬಳದಿಂದ ಟಿಡಿಎಸ್‌ (ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌) ಕಡಿತಗೊಳಿಸಿ, ಅದನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೆ ಇತರ ಉದ್ದೇಶಗಳಿಗೆ ಬಳಸಿಕೊಂಡಿವೆ. ಇದು ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಕ್ರಿಮಿನಲ್‌ ಅಪರಾಧವಾಗಿದ್ದು, ಶೀಘ್ರದಲ್ಲೇ ಕೆಲ ದೊಡ್ಡ ಉದ್ಯಮಿಗಳ ಬಂಧನವಾಗಲಿದೆ ಎಂದು ಹೇಳಲಾಗಿದೆ.

ಹಿಂದೆ ಮದ್ಯದ ದೊರೆ ವಿಜಯ್‌ ಮಲ್ಯ ಕೂಡ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ನೌಕರರಿಂದ ಕಡಿತಗೊಳಿಸಿದ ಟಿಡಿಎಸ್‌ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿ ಮಾಡದೆ ವಂಚಿಸಿದ್ದರು. ಈಗ ಅಂತಹುದೇ 447 ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೀಗೆ ವಂಚನೆ ಎಸಗಿದವರಲ್ಲಿ ದೇಶದ ಒಬ್ಬ ಪ್ರಖ್ಯಾತ ಬಿಲ್ಡರ್‌ ಕೂಡ ಸೇರಿದ್ದಾರೆ. ರಾಜಕೀಯವಾಗಿಯೂ ಪ್ರಭಾವಿಯಾಗಿರುವ ಇವರು 100 ಕೋಟಿ ರು.ಗಿಂತ ಹೆಚ್ಚಿನ ವಂಚನೆ ಎಸಗಿದ್ದಾರೆ.

ಟಿಡಿಎಸ್‌ ಹಗರಣದಲ್ಲಿ ಭಾಗಿಯಾದವರಲ್ಲಿ ಪ್ರೊಡಕ್ಷನ್‌ ಹೌಸ್‌ಗಳು, ಮೂಲಸೌಕರ್ಯ ಕಂಪನಿಗಳು, ಸ್ಟಾರ್ಟಪ್‌ಗಳು, ಎಂಎನ್‌ಸಿಗಳೂ ಸೇರಿವೆ. ಇವರಲ್ಲಿ ಬಹುತೇಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಟಿಡಿಎಸ್‌ ಕಡಿತಗೊಳಿಸುವ ಯಾವುದೇ ಕಂಪನಿಯು ಅದನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಇಲ್ಲದಿದ್ದರೆ ಕಂಪನಿಯ ಮುಖ್ಯಸ್ಥರಿಗೆ ಕನಿಷ್ಠ 3 ತಿಂಗಳ ಕಠಿಣ ಶಿಕ್ಷೆಯಿಂದ ಏಳು ವರ್ಷದವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.