Asianet Suvarna News Asianet Suvarna News

"Jesus ನಿಜವಾದ ದೇವರು, ಉಳಿದ ದೇವರಿಲ್ಲ" ತಮಿಳುನಾಡು ಪಾದ್ರಿ ಜತೆ Rahul Gandhi ವಿವಾದಿತ ಸಂಭಾಷಣೆ

Rahul Gandhi controversy: ರಾಹುಲ್‌ ಗಾಂಧಿ ಭಾರತ ಏಕತಾ ಯಾತ್ರೆ ಆರಂಭಿಸಿದ ದಿನದಿಂದ ಒಂದಲ್ಲಾ ಒಂದು ರೀತಿಯ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಇದೀಗ ತಮಿಳುನಾಡು ಪಾದ್ರಿಯೊಬ್ಬರ ಜತೆಗಿನ ರಾಹುಲ್‌ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಖಂಡನೆಗೆ ಗುರಿಯಾಗಿದೆ.

only jesus is real god not other gods says tamil nadu pasture george ponnayya with rahul gandhi
Author
First Published Sep 10, 2022, 1:39 PM IST

ಚೆನ್ನೈ: ಕಾಂಗ್ರೆಸ್‌ ಭಾರತ ಏಕತಾ ಯಾತ್ರೆಯಿಂದ ಮತ್ತೆ ರಾಹುಲ್‌ ಗಾಂಧಿ ಬಿಜೆಪಿಯ ಟ್ರೋಲ್‌ಗೆ ಗುರಿಯಾಗಿದ್ದಾರೆ. ಶುಕ್ರವಾರ ರಾಹುಲ್‌ ಗಾಂಧಿ ಧರಿಸಿದ್ದ ಬರ್ಬೆರಿ ಟೀ ಶರ್ಟ್‌ ರೂ. 41,000 ಮೌಲ್ಯದ್ದು ಎಂದು ಟ್ರೋಲ್‌ ಮಾಡಲಾಗಿತ್ತು. ಇದೀಗ ತಮಿಳುನಾಡಿನಲ್ಲಿ ರಾಹುಲ್‌ ಗಾಂಧಿ ಪಾದ್ರಿಯೊಬ್ಬರ ಜತೆಗಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಮಿಳುನಾಡಿನ ಕನ್ಯಾಕುಮಾರಿಯ ಜಾರ್ಜ್‌ ಪೊನ್ನಯ್ಯ ಎಂಬ ಕ್ರೈಸ್ತ ಪಾದ್ರಿಯವರನ್ನು ರಾಹುಲ್‌ ಗಾಂಧಿ ಭೇಟಿ ಮಾಡಿದ್ದಾರೆ. ಈ ವೇಳೆ ಜಾರ್ಜ್‌ ಪೊನ್ನಯ್ಯ ಏಸು ಒಬ್ಬನೇ ನಿಜವಾದ ದೇವರು, ಮಿಕ್ಕ ದೇವರು ನಿಜವಾದ ದೇವರಲ್ಲ ಎಂದು ರಾಹುಲ್‌ ಗಾಂಧಿಗೆ ಹೇಳುತ್ತಾರೆ. ಈ ಸಂಭಾಷಣೆಯ ವಿಡಿಯೋ ವೈರಲ್‌ ಆಗಿದ್ದು, ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ತಮಿಳುನಾಡು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಈ ಕ್ಲಿಪ್ಪನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ರಾಹುಲ್‌ ಗಾಂಧಿ ಜೀಸಸ್‌ ಬಗೆಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಾದ್ರಿ, "ಜೀಸಸ್‌ ಒಬ್ಬನೇ ನಿಜವಾದ ದೇವರು, ಆತ ಮನುಷ್ಯ ರೂಪದಲ್ಲಿ ಖುಷಿ ಪಡುತ್ತಿದ್ದಾನೆ. ಮಿಕ್ಕ ದೇವರುಗಳು ಅಥವಾ ಶಕ್ತಿಗಳು ಆ ರೀತಿಯಲ್ಲ," ಎಂದಿದ್ದಾರೆ. 

ಶೆಹಜಾದ್‌ ಪೂನಾವಾಲಾ ಟ್ವೀಟ್‌ನಲ್ಲಿ "ರಾಹುಲ್‌ ಗಾಂಧಿಯನ್ನು ಭೇಟಿಯಾದ ಜಾರ್ಜ್‌ ಪೊನ್ನಯ್ಯ "ಏಸು ಒಬ್ಬನೇ ನಿಜವಾದ ದೇವರು, ಬೇರೆ ದೇವರುಗಳು ಮತ್ತು ಶಕ್ತಿಯಂತಲ್ಲ," ಎಂಬ ಹೇಳಿಕೆ ನೀಡಿದ್ದಾರೆ. ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿ ಪೊನ್ನಯ್ಯ ಬಂಧನವಾಗಿದ್ದರು. ನಾನು ಭಾರತ ಮಾತೆಯ ಕಲ್ಮಶದಿಂದ ದೂರ ಉಳಿಯಲು ಶೂ ಧರಿಸುತ್ತೇನೆ ಎಂಬ ವಿವಾದಿತ ಹೇಳಿಕೆಯನ್ನೂ ನೀಡಿದ್ದರು. ರಾಹುಲ್‌ ಗಾಂಧಿ ಭಾರತ ಒಡೆಯುವ ಜೊತೆ ನಿಂತು ಭಾರತ ಜೋಡಿಸುವ ಮಾತನಾಡುತ್ತಿದ್ದಾರೆ," ಎಂದಿದ್ದಾರೆ. 

ಏಸು ದೇವರ ಸ್ವರೂಪವಾ ಅಥವಾ ಏಸುವೇ ದೇವರಾ ಎಂಬ ಪ್ರಶ್ನೆಯನ್ನು ಪೊನ್ನಯ್ಯ ಅವರಿಗೆ ರಾಹುಲ್‌ ಗಾಂಧಿ ಕೇಳಿದ್ದರು. ಇದಕ್ಕೆ ಉತ್ತರಿಸುವ ವೇಳೆ ಪೊನ್ನಯ್ಯ ಈ ರೀತಿಯ ಹೇಳಿಕೆ ನೀಡಿದರೆ, ಅಲ್ಲೇ ಉಪಸ್ಥಿತರಿದ್ದ ಇನ್ನೊಬ್ಬರು "ಏಸು ದೇವರ ಮಗನೂ ಹೌದು, ಖುದ್ದು ಅವರೇ ದೇವರೂ ಹೌದು," ಎಂದು ಹೇಳಿದರು. 

ಕಾಂಗ್ರೆಸ್‌ ವಕ್ತಾರ ಜೈರಾಂ ರಮೇಶ್‌  ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, "ಇದು ಶುದ್ಧ ಸುಳ್ಳು ತುಂಬಿದ ವಿಡಿಯೋ. ಇದು ಬಿಜೆಪಿಯ ಪಿತೂರಿ ಹೊರತು ಇದರಲ್ಲಿ ಸತ್ಯವೇನೂ ಇಲ್ಲ. ನಾವು ಭಾರತ ಏಕತಾ ಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿ ಜನರಲ್ಲಿ ಬಿರುಕು ಮೂಡಿಸುತ್ತಿದ್ದರೆ ಕಾಂಗ್ರೆಸ್‌ ಭಾರತ ಜೋಡಿಸುವತ್ತ ಕೆಲಸ ಮಾಡುತ್ತಿದೆ. ಬಿಜೆಪಿ ಭಾರತದ ವಿವಿಧತೆಯನ್ನು ಇಷ್ಟಪಡುವುದಿಲ್ಲ, ಕಾಂಗ್ರೆಸ್‌ ವಿವಿಧತೆಯಲ್ಲಿನ ಏಕತೆಯನ್ನು ನಂಬುತ್ತದೆ," ಎಂದು ಹೇಳಿದ್ದಾರೆ. 

ಜಾರ್ಜ್‌ ಪೊನ್ನಯ್ಯ ಜನನಯಾಗ ಕ್ರೈಸ್ತವ ಪೆರವಾಯ್‌ ಎನ್‌ಜಿವೊದ ಸದಸ್ಯ. ಇದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. ಆಗಾಗ ಬೇರೆ ಧರ್ಮಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ಅವರು ಆಗಾಗ ನೀಡುತ್ತಲೇ ಇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅವರ ಭಾಷಣ ಸಂಬಂಧ ದೇಶವ್ಯಾಪಿಯಾಗಿ ಸುದ್ದಿಯಾಗಿದ್ದರು. ನಂತರ ಅವರ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಕಡೆಗೆ ಸಾರ್ವಜನಿಕವಾಗಿ ಕ್ಷಮೆಯನ್ನೂ ಕೇಳಿದ್ದರು.

ಇದನ್ನೂ ಓದಿ: ಭಾರತ್‌ ಜೋಡೋ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮ: ಕಾಂಗ್ರೆಸ್

ಸೆಪ್ಟೆಂಬರ್‌ 8ರಿಂದ ಭಾರತ ಏಕತಾ ಯಾತ್ರೆ (Bharat Jodo Yatra) ಆರಂಭವಾಗಿದೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ ವರ್ಚಸ್ಸು ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ 2024 ಚುನಾವಣೆಯನ್ನು ಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗಾಗಿ ಈ ಯಾತ್ರೆಯನ್ನು ಕಾಂಗ್ರೆಸ್‌ ಪಕ್ಷ ಆರಂಭಿಸುತ್ತಿದೆ. ಈ ಮೂಲಕ ಹೆಚ್ಚು ಜನರನ್ನು ತಲುಪಬೇಕು ಮತ್ತು ಕೆಳಮುಖವಾಗಿ ಸಾಗುತ್ತಿರುವ ಪಕ್ಷದ ವರ್ಚಸ್ಸನ್ನು ಮತ್ತೆ ಮೇಲೆತ್ತಬೇಕು ಎಂಬ ಇರಾದೆ ರಾಹುಲ್‌ ಗಾಂಧಿಯವರದ್ದಾಗಿದೆ. 

ಆದರೆ ಕಾಂಗ್ರೆಸ್‌ ಈ ಕಾರಣವನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಕೋಮು ಕಲಹಗಳು ಮತ್ತು ಅಹಿತಕರ ಘಟನೆಗಳು ನಿಲ್ಲಬೇಕು. ಇಡೀ ದೇಶ ಒಂದಾಗಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷ ಹೇಳುತ್ತಿದೆ. ಈ ಯಾತ್ರೆಯ ವೇಳೆ ಪಕ್ಷ ಜನರ ಸಮಸ್ಯೆಯನ್ನು ಆಲಿಸುತ್ತದೆ ಹೊರತು ಹೆಚ್ಚು ಮಾತನಾಡುವುದಿಲ್ಲ ಎಂದೂ ಪಕ್ಷ ಹೇಳಿದೆ. 

ಇದನ್ನೂ ಓದಿ: ಬ್ರಿಟಿಷರ ರೀತಿ ದೇಶದಲ್ಲಿ ಬಿಜೆಪಿ ಆಡಳಿತ: ರಾಹುಲ್‌ ಗಾಂಧಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರೆ ಡಾ ಶಮಾ ಮೊಹಮ್ಮದ್‌, ಯಾತ್ರೆಯುದ್ದಕ್ಕೂ ರಾಹುಲ್‌ ಗಾಂಧಿ ಕಂಟೈನರ್‌ ಮನೆಯಲ್ಲಿ ತಂಗಲಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ರಾಹುಲ್‌, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಟಲಿಯಲ್ಲಿದ್ದಾರೆ. ಸೋನಿಯಾ ಗಾಂಧಿ ತಾಯಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. "ಈ ಯಾತ್ರೆಯನ್ನು ಕಳೆದ ನಾಲ್ಕು ತಿಂಗಳ ಹಿಂದೆಯೇ ರೂಪಿಸಲಾಗಿತ್ತು. ಭಾರತ ಬಹು ಸಂಖ್ಯಾತ ದೇಶ. ವಿವಿಧ ಆಚರಣೆಗಳು, ಸಂಸ್ಕೃತಿ, ಭಾಷೆಗಳನ್ನು ಹೊಂದಿರುವ ದೇಶ. ಈ ಸಾಮಾರಸ್ಯವನ್ನು ಹಾಳು ಮಾಡಲು ಯತ್ನ ನಡೆಯುತ್ತಿದೆ. ದೇಶವನ್ನು ಒಗ್ಗೂಡಿಸುವ ಮತ್ತು ವಿವಿಧತೆಯನ್ನು ಕಾಪಾಡುವ ಸಲುವಾಗಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ," ಎಂದು ಡಾ ಶಮಾ ಮೊಹಮ್ಮದ್‌ ಹೇಳಿದ್ದಾರೆ. 

ಇದನ್ನೂ ಓದಿ: Rahul Gandhi T Shirt: 41 ಸಾವಿರ ರೂಪಾಯಿ ಟಿ-ಶರ್ಟ್‌ ಧರಿಸಿ ರಾಹುಲ್‌ ಯಾತ್ರೆ, ಬಿಜೆಪಿಯ ಟೀಕೆ!

ಕಾಂಗ್ರೆಸ್‌ ಹಿರಿಯ ಸದಸ್ಯ ದಿಗ್ವಿಜಯ್‌ ಸಿಂಗ್‌ ಮಾತನಾಡಿ, "ಯಾತ್ರೆ ಸೆಪ್ಟೆಂಬರ್‌ 8ರಂದು ಆರಂಭವಾಗಲಿದೆ. ಪಕ್ಷದ ನಾಯಕರು ಪ್ರತಿ ನಿತ್ರ ಆರರಿಂದ ಏಳು ಗಂಟೆ ನಡೆಯುತ್ತಾರೆ. ಮತ್ತು ಈ ವೇಳೆ ಜನರನ್ನು ಭೇಟಿಯಾಗುತ್ತಾರೆ," ಎಂದು ಹೇಳಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆ ನಡುವೆ ಯಾತ್ರೆ ಪ್ರತಿನಿತ್ಯ ಆರಂಭವಾಗಲಿದೆ. ಮತ್ತು ದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಯಾತ್ರೆ ತೆರಳಲಿದೆ ಎಂದೂ ಅವರು ಮಾಹಿತಿ ನೀಡಿದ್ದರು. 

ಇದನ್ನೂ ಓದಿ: Fact Check: ಬಿಜೆಪಿ ಚಿಹ್ನೆಯ ಟಿ-ಶರ್ಟ್‌ ಧರಿಸಿದ್ದ ಬಾಲಕನ ಜೊತೆ ರಾಹುಲ್‌ ಗಾಂಧಿ.?

Follow Us:
Download App:
  • android
  • ios