ಬೆಳಗಾವಿ [ಜು.28]:  ‘ಮೈತ್ರಿ ಸರ್ಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣವಲ್ಲ, ಒಂದು ವಸ್ತು ಕಾರಣ’ ಎಂದು ಮಾರ್ಮಿಕ ಹೇಳಿಕೆ ನೀಡಿರುವ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಆ ವಸ್ತು ಯಾವುದೆಂದು ಸಮಯ ಬಂದಾಗ ಹೇಳುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಕಾರ್ಯನಿರತವಾಗಿದ್ದ ಬಿಜೆಪಿ ನಾಯಕರು ವ್ಯವಸ್ಥಿತವಾಗಿ ಆಪರೇಷನ್‌ ಕಮಲ ಮಾಡುತ್ತಿದ್ದರು. ಈ ಬಗ್ಗೆ ಮೊದಲೇ ಹೈಕಮಾಂಡ್‌, ಹಿರಿಯ ನಾಯಕರಿಗೆ ಎಚ್ಚರಿಸಿದ್ದೆ. ಆದರೆ ನನ್ನ ಮಾತನ್ನು ಹೈಕಮಾಂಡ್‌ ಪರಿಗಣಿಸಲಿಲ್ಲ. 

ಒಂದು ವೇಳೆ ಪರಿಗಣಿಸಿದ್ದಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧವೂ ಅಸಮಾಧಾನ ಹೊರಹಾಕಿದರು. ಕಾಂಗ್ರೆಸ್‌ ರಿವರ್ಸ್‌ ಆಪರೇಷನ್‌ ಮಾಡಿದ್ದರೆ ಸಕ್ಸಸ್‌ ಆಗುತ್ತಿತ್ತು. ಆದರೆ ನಾವು ಮಾಡಲಿಲ್ಲ ಎಂದರು.

ಎಲ್ಲ ಅತೃಪ್ತರೂ ಅನರ್ಹರಾಗುವ ಸಾಧ್ಯತೆ

ಸ್ಪೀಕರ್‌ ರಮೇಶ ಕುಮಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ. ಅತೃಪ್ತ ಶಾಸಕರ ಅನರ್ಹತೆಯನ್ನು ಮೊದಲೇ ಮಾಡಿದ್ದರೆ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಸಾಧ್ಯತೆ ಹೆಚ್ಚಿದೆ ಎಂದರು.