ಬೆಂಗಳೂರು(ಸೆ.13): ಮನೆಯೊಳಗಿನ ಕಿಚ್ಚು ಮನೆಯ ಸುಡುವುದಲ್ಲದೆ ನೆರೆ ಮನೆಯ ಸುಡದು ಎನ್ನುವ ವಚನದಂತೆ, ನಿನ್ನೆ ಭುಗಿಲೆದ್ದಿದ್ದ ಕಾವೇರಿಯ ಕಿಚ್ಚಿಗೆ ನಮ್ಮವನೇ ಬಲಿಯಾಗಿದ್ದಾನೆ. ನಗರದಲ್ಲಿ ಭುಗಿಲೆದ್ದ ಆಕ್ರೋಶದಲ್ಲಿ ಪೊಲೀಸರ ಗುಂಡಿಗೆ ಪ್ರಾಣ ತೆತ್ತಿದ್ದಾನೆ.
ನಿನ್ನೆ ಸಂಜೆಯಾಗುತ್ತಿದ್ದಂತೆ ಉಗ್ರಸ್ವರೂಪ ಪಡೆದಿತ್ತು ಕಾವೇರಿ ಕಿಚ್ಚು, ಬೆಂಗಳೂರಿನ ಹೆಗ್ಗನಹಳ್ಳಿಯಂತು ಅಕ್ಷರಶಃ ರಣಾಂಗಣವಾಗಿತ್ತು. ಒಂದು ಕಡೆ ಜನರು ಕಲ್ಲು ತೂರಾಟ ಮಾಡುತ್ತಿದ್ದರೆ. ಮತ್ತೊಂದು ಪೊಲೀಸರು ಅರೆ ಸೇನಾ ಪಡೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಿತ್ತು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಹೆಗ್ಗನಹಳ್ಳಿಯ ಜನರು ಪೊಲೀಸರ ಮೇಲೆಯೇ ಮುಗಿಬಿದ್ದರು. ಹೊಯ್ಸಳ ವಾಹನದ ಧ್ವಂಸಗೊಳಿಸಲು ಮುಂದಾದರು. ಈ ವೇಳೆ ಡಿಸಿಪಿ ಸುರೇಶ್ ಮೇಲೆ ಹಲ್ಲೆ ನಡೆದಿದ್ದು ಈ ವೇಳೆ ಡಿಸಿಪಿ ಸುರೇಶ್ ಸೇರಿದಂತೆ ಎಸ್ಐ ಸಂತೋಷ್, ಇಬ್ಬರು ಪೇದೆಗೆ ಗಾಯವಾಯಿತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನ ಅರಿತ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಗುಂಡು ಹಾರಿಸಿದರು.
ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಪೊಲೀಸರು ಹಾರಿಸಿದ ಗುಂಡು ತಗುಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡರು. ಅದರಲ್ಲಿ ಈ ಉಮೇಶ್ ಕೂಡ ಒಬ್ಬ. ಗುಂಡು ಬೆನ್ನಿಗೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಮೃತಪಟ್ಟ.
ಇನ್ನೂ ಈ ಉಮೇಶ್‌ಗೆ 3 ವರ್ಷಗಳ ಹಿಂದೆ ಕಲಾವತಿ ಜೊತೆ ಮದುವೆಯಾಗಿತ್ತು. ಇವರಿಗೆ ಒಂದೂವರೆ ವರ್ಷದ ಮುದ್ದಾದ ಹೆಣ್ಣುಮಗು ಕೂಡ ಇದೆ. ಇನ್ನೂ ಪತ್ನಿ ಕಲಾವತಿ 7 ತಿಂಗಳ ಗರ್ಭಿಣಿ ಕೂಡ ಹೌದು. ಇದೀಗ ಇವರೆಲ್ಲ ಉಮೇಶ್‌ನನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈತನ ಸಾವಿಗೆ ಸರ್ಕಾರ ಪರಿಹಾರ ಘೋಷಿಸೋವರೆಗೆ ಶವವನ್ನ ಎತ್ತದಿರಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇವನಷ್ಟೇ ಅಲ್ಲ, ಪೊಲೀಸರ ಗುಂಡೇಟು ತಿಂದು ಇನ್ನೂ ಇಬ್ಬರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾರದ್ದೋ ತಪ್ಪಿಗೆ ಪ್ರಾಣಬಿಟ್ಟ ಉಮೇಶನ ಕುಟುಂಬ ಬೀದಿಪಾಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಂತ ಹೋರಾಟ, ಉಗ್ರ ಸ್ವರೂಪ ಪಡೆದು ಒಂದು ಅಮಾಯಕ ಜೀವ ಬಲಿಯಾಗಿರುವುದು ವಿಪರ್ಯಾಸ.
