ಬಿಬಿಎಂಪಿ ಅಂದಾಜಿಸಿರುವ ಪ್ರಕಾರ ಪ್ರತಿ ದಿನ ಕ್ಯಾಂಟೀನ್‌ವೊಂದರಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಸೇರಿ ಸರಾಸರಿ 1150 ಜನರು ಊಟ ಮಾಡುತ್ತಿದ್ದಾರೆ
ಬೆಂಗಳೂರು(ನ.07): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ಆರಂಭವಾದ ಎರಡೂವರೆ ತಿಂಗಳಿನಲ್ಲಿ ಒಂದು ಕೋಟಿ ಜನರಿಗೆ ಆಹಾರಭಾಗ್ಯ ಕಲ್ಪಿಸಿದೆ.
ಆ.16ರಂದು 101 ಹಾಗೂ ನಂತರ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ವಾರ್ಡ್ಗಳಲ್ಲಿ ಕ್ಯಾಂಟೀನ್ ಪ್ರಾರಂಭಿಸಿದೆ. ಇದಕ್ಕೆ ಸ್ಥಳೀಯ ನಿವಾಸಿಗಳು, ಕೂಲಿ ಕಾರ್ಮಿಕರು, ನಿರ್ಗತಿಕರು, ವಲಸಿಗರು ಸೇರಿದಂತೆ ಬಡವರಿಗೆ ದಿನದ ಮೂರೂ ಹೊತ್ತು ಕಡಿಮೆ ದರದಲ್ಲಿ ಊಟ ಕಲ್ಪಿಸುವ ಮೂಲಕ ಹಸಿವು ನೀಗಿಸುತ್ತಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ 83 ದಿನದಲ್ಲಿ ಒಂದು ಕೋಟಿ ಜನರು ಊಟ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಊಟ, ತಿಂಡಿ ಸವಿಯುವ ಮೂಲಕ ತಮ್ಮ ಹಸಿವು ನೀಗಿಸಿಕೊಂಡಿದ್ದಾರೆ.
ಸರಾಸರಿ 1150 ಜನರಿಗೆ ಊಟ:
ಬಿಬಿಎಂಪಿ ಅಂದಾಜಿಸಿರುವ ಪ್ರಕಾರ ಪ್ರತಿ ದಿನ ಕ್ಯಾಂಟೀನ್ವೊಂದರಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಸೇರಿ ಸರಾಸರಿ 1150 ಜನರು ಊಟ ಮಾಡುತ್ತಿದ್ದಾರೆ. ಮೊದಲು 1500 ಜನರಿಗೆ ಊಟ ಪೂರೈಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಕೆಲ ಕ್ಯಾಂಟೀನ್ಗಳಲ್ಲಿ ಉತ್ತಮ ಸ್ಪಂದನೆ ದೊರೆಯದ ಕಾರಣ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಉಳಿದ ಕ್ಯಾಂಟೀನ್ಗಳಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಯನಗರದ ಕನಕನಪಾಳ್ಯದಲ್ಲಿ ಆ.16ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ಗೆ ಚಾಲನೆ ನೀಡಿದರು. ಇಲ್ಲಿಯವರೆಗೆ 150 ಕ್ಯಾಂಟೀನ್ಗಳು ಊಟ ಸರಬರಾಜು ಮಾಡುತ್ತಿದ್ದು, ಇನ್ನೂ 48 ವಾರ್ಡ್ಗಳಲ್ಲಿ ಕ್ಯಾಂಟೀನ್ ತೆರೆಯಬೇಕಿದೆ. ಅದರಲ್ಲಿ 18 ವಾರ್ಡ್ಗಳಲ್ಲಿ ಜಾಗದ ಸಮಸ್ಯೆ ಎದುರಾಗಿರುವ ಕಾರಣ ಮೊಬೈಲ್ ಕ್ಯಾಂಟೀನ್ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಆ.16ರಿಂದ ಈ ವರೆಗೆ ಒಂದು ಕೋಟಿ ಜನರು ಊಟ ಸವಿದಿದ್ದಾರೆ. ಸದ್ಯ 150 ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, 48 ಪ್ರಾರಂಭವಾಗಬೇಕಿದೆ ಎಂದು ಮಾಹಿತಿ ನೀಡಿದರು.
