ಬೀದರ್(ಸೆ. 16): ರಾಜ್ಯದಲ್ಲಿ ಮತ್ತೊಂದು ಬಸ್ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಮೂರು ವರ್ಷದ ಬಾಲಕನೊಬ್ಬ ಸಜೀವ ದಹನವಾದ ದಾರುಣ ಘಟನೆ ಬೀದರ್'ನಲ್ಲಿ ನಡೆದಿದೆ. ವಿಧಿ ವಿಪರ್ಯಾಸ ಎಂದರೆ, ಈ ದುರಂತದಲ್ಲಿ ಇಡೀ ಬಸ್'ನಲ್ಲಿದ್ದವರನ್ನೆಲ್ಲಾ ರಕ್ಷಿಸಲು ನೆರವಾದ ವ್ಯಕ್ತಿ, ತನ್ನ ಮಗುವನ್ನೇ ಮರೆತುಬಿಟ್ಟರು.
ಹುಮನಾಬಾದ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೆಳಗ್ಗೆ ಶಿರಡಿಯಿಂದ ಹೈದ್ರಾಬಾದ್ ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್'ನ ಕಾವೇರಿ ಬಸ್'ಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಹೈದ್ರಾಬಾದ ಮೂಲದ 3 ವರ್ಷದ ವಿಹಾನ ರಾಮಪ್ರಸಾದ ಸಜೀವ ದಹನಗೊಂಡು, ಮೂವರಿಗೆ ಗಂಭೀರ ಗಾಯವಾಗಿದೆ.
ಬಸ್ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಚಾಲಕನು ಠಾಕೂರ್ ಢಾಬಾ ಬಳಿ ಬೆಳಗ್ಗೆ 6:15ಕ್ಕೆ ಬಸ್ ನಿಲ್ಲಿಸಿದ್ದಾನೆ.. ತತ್'ಕ್ಷಣ ಆ ವ್ಯಕ್ತಿಯು ಎಚ್ಚೆತ್ತು ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಮಲಗಿದ್ದ ಪ್ರಯಾಣಿಕರನ್ನ ಎಚ್ಚರಿಸಿ ಹಿಂಬದಿಯ ಕಿಟಕಿ ಹೊಡೆದು ಹೊರಬರಲು ಸಹಕರಿಸಿದ್ದಾರೆ. ಆದ್ರೆ, ಮಲಗಿದ್ದ ತನ್ನ ಮಗುವನ್ನೇ ಮರೆತುಬಿಡುತ್ತಾರೆ. ಪರಿಣಾಮ ಆ ಮೂರು ವರ್ಷದ ಕಂದಮ್ಮ ಸಜೀವ ದಹನವಾಗಿದೆ.
ಒಟ್ಟಿನಲ್ಲಿ ಹೈಟೆಕ್ ಬಸಗಳಿಗೆ ಆಕಸ್ಮಿಕ ಬೆಂಕಿ ತಗಲೋ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬೀದರನಲ್ಲಿ ಭಾರಿ ದುರಂತ ತಪ್ಪಿದೆಯಾದರೂ ಬಾಲಕನನ್ನು ಕಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ಅನೀಲಕುಮಾರ್ ದೇಶಮುಖ್, ಸುವರ್ಣ ನ್ಯೂಸ್, ಬೀದರ್
