ಉಡುಪಿಯ ಪರೀಕದಲ್ಲಿ ಕಳೆದ ಎರಡು ಶತಮಾನಗಳಿಂದ ಕಂಬಳ ನಡೆಸಿಕೊಂಡು ಬರಲಾಗುತ್ತಿದ್ದು,  ನ್ಯಾಯಾಲಯ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ  ಕೋಣದ ಓಟ ಮತ್ತೆ ಶುರುವಾಗಿದೆ.

ಉಡುಪಿ(ಡಿ.2): ಕರಾವಳಿಯಲ್ಲಿ ಮತ್ತೆ ಕಂಬಳದ ಗತವೈಭವ ಮರುಕಳಿಸಿದೆ. ಕಳೆದ ವರ್ಷ ನಿಂತಿದ್ದ ಕಂಬಳ ಈ ವರ್ಷ ಮತ್ತೆ ತನ್ನ ಪರ್ವವನ್ನಾರಂಭ ಮಾಡಿದೆ. ಕರಾವಳಿಗರು ಈಗ ಖುಷಿ ಖುಷಿಯಾಗಿ ಕೋಣಗಳ ರೇಸ್ ಆರಂಭಿಸಿದ್ದಾರೆ. ಉಡುಪಿಯ ಪರೀಕದಲ್ಲಿ ಕಳೆದ ಎರಡು ಶತಮಾನಗಳಿಂದ ಕಂಬಳ ನಡೆಸಿಕೊಂಡು ಬರಲಾಗುತ್ತಿದ್ದು, ನ್ಯಾಯಾಲಯ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಕೋಣದ ಓಟ ಮತ್ತೆ ಶುರುವಾಗಿದೆ.

ಕಂಬಳಕ್ಕೂ ಮುನ್ನ ಗುತ್ತಿನ ಮನೆಯ ಅರಸರ ಮುಂದೆ ದೈವ ಹೆಜ್ಜೆಹಾಕುತ್ತದೆ. ಕೋಣ ಮತ್ತು ದೈವದ ಪಾತ್ರದಾರಿ ಜೊತೆಯಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಾರೆ. ಈ ಮಹೋತ್ಸವಕ್ಕಾಗಿ ರೈತರು ವರ್ಷವಿಡೀ ಕಾತರದಿಂದ ಕಾಯುತ್ತಾರೆ. ಗುತ್ತಿನ ಮನೆಯ ಮುಂದೆ ಕೋಣಗಳನ್ನು ಬಗೆ ಬಗೆಯಾಗಿ ಅಲಂಕರಿಸಿ, ರಾಜಠೀವಿಯಲ್ಲಿ ಕೆಸರು ಗದ್ದೆಗೆ ಇಳಿಯುವುದೇ ಒಂದು ಅಪೂರ್ವ ಸನ್ನಿವೇಶವಾಗಿರುತ್ತದೆ. ಕೋಣಗಳ ಮೆರವಣಿಗೆ ನಡೆದ ನಂತರ ಕೋಣಗಳ ರೇಸ್ ಆರಂಭ ಮಾಡಲಾಗುತ್ತದೆ. ಇದೀಗ ಹಲವು ಅಡೆತಡೆಗಳನ್ನ ಮೀರಿ ಕಂಬಳ ಕ್ರೀಡೆ ಮತ್ತೆ ಆರಂಭವಾಗಿರುವುದು ಕರಾವಳಿಗರಲ್ಲಿ ಸಂತಸ ತಂದಿದೆ.