ಬಿಎಸ್ ವೈ ಸಂಪುಟದ 17 ಸಚಿವರು ಪ್ರಮಾಣ ವಚನ ಸ್ವೀಕರಿಸಿ 4 ದಿನವಾಯ್ತು. ಆದ್ರೆ, ಈವರೆಗೂ ಸಚಿವರ ಖಾತೆ ಹಂಚಿಕೆ ಕಸರತ್ತು ಮುಗಿದಿಲ್ಲ. ಇದರ ನಡುವೆ ಮತ್ತೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಂಪುಟ ವಿಸ್ತರಣೆ ಬಗ್ಗೆ ಸಮಾಧಾನಿಕ ಶಾಸಕನಿಗೆ ಸ್ವತಃ ಹೈಕಮಾಂಡ್ ಹೇಳಿದೆಯಂತೆ.
ಬೆಂಗಳೂರು, [ಆ.24]: ಈ ಮೊದಲೇ ಹೇಳಿದ್ದ ಸುವರ್ಣ ನ್ಯೂಸ್ ಸುದ್ದಿ ಪಕ್ಕಾ ಆದಂತಿದೆ. ಮತ್ತೆ ಮೂವರು ಶಾಸಕರು ಬಿ.ಎಸ್.ಯಡಿಯೂರಪ್ಪ ಸಂಪುಟ ಸೇರ್ಪಡೆಯಾಗಲಿದ್ದು, ಮುಂದಿನ ವಾರ ಮೂವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಮತ್ತೆ ಸಂಪುಟ ವಿಸ್ತರಣೆ ಆಗುತ್ತೆ ಎಂದು ಹೇಳಿದ್ದಾರೆ.
ಮುನಿದ ಮೂವರಿಗೆ ಮಂತ್ರಿ ಪಟ್ಟ, ಸೋಮವಾರ ಪ್ರಮಾಣ ವಚನ ಸಾಧ್ಯತೆ
ಇಂದು [ಶನಿವಾರ] ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಮುಂದಿನ ವಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ಸಿಗುತ್ತೆ. ಸ್ವಲ್ಪ ಕಾಯಿರಿ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
7 ಬಾರಿ ಶಾಸಕನಾಗಿ ಗೆದ್ದರೂ ಸಚಿವ ಸ್ಥಾನ ನೀಡಿಲ್ಲವೆಂದು ಒಳಗೊಳಗೆ ಬಿಜೆಪಿ ನಾಯಕರ ವಿರುದ್ಧ ಕತ್ತಿ ಮಸೆಯುತ್ತಿದ್ದ ಉಮೇಶ್ ಕತ್ತಿ ಅವರ ಈ ಹೇಳಿಕೆ ನೋಡಿದರೆ, ಮತ್ತೆ ಮೂವರು ಸಚಿವರಾಗಲಿದ್ದಾರೆ. ಮೂವರಲ್ಲಿ ಬಾಲಚಂದ್ರ ಜಾರಕಿಹೊಳಿ ಮತ್ತು ಕತ್ತಿಗೆ ಸಚಿವ ಸ್ಥಾನ ಪಕ್ಕಾ ಆದಂತಾಗಿದೆ.
ಆದ್ರೆ, ಇನ್ನುಳಿದ ಒಂದು ಸಚಿವ ಸ್ಥಾನ ಯಾರಿಗೆ ಎನ್ನುವುದು ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಚಿತ್ರದರ್ಗದ ಚಂದ್ರಪ್ಪ ಹಾಗೂ ರೇಣುಕಾಚಾರ್ಯ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿ ಉನ್ನತ ಮೂಲಗಳಿಂದ ಬಂದ ಪ್ರಕಾರ, ಉಳಿದಿರುವ ಒಂದು ಸಚಿವ ಸ್ಥಾನವನ್ನು ಚಂದ್ರಪ್ಪಗೆ ಒಲಿಯುವ ಸಾಧ್ಯತೆಗಳು ಹೆಚ್ಚಿವೆ.
