ನವದೆಹಲಿ(ಮೇ.21): ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಅವರ 28ನೇ ಪುಣ್ಯತಿಥಿ ಅಂಗವಾಗಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಟ್ವೀಟ್ ಮೂಲಕ ರಾಜೀವ್ ಗಾಂಧಿ ನೆನೆದಿರುವ ಪ್ರಧಾನಿ ಮೋದಿ, ಮಾಜಿ ಪ್ರಧಾನಿಗೆ ನನ್ನ ನಮನಗಳು ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅದರಂತೆ ತಂದೆಯನ್ನು ನೆನೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ನನ್ನ ತಂದೆ ನನಗೆ ಯಾವಾಗಲೂ ಎಲ್ಲರನ್ನೂ ಪ್ರೀತಿಸುವಂತೆ ಹೆಳುತ್ತಿದ್ದರು. ಯಾರ ವಿರುದ್ಧವೂ ಮನಸ್ಸಿನಲ್ಲಿ ದ್ವೇಷ ಭಾವನೆ ಬೆಳೆಸಿಕೊಳ್ಳಬೇಡ ಎಂದು ಕಿವಿಮಾತು ಹೇಳಿದ್ದರು. ನಾನವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ..'ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ರಾಜೀವ್ ಪುಣ್ಯತಿಥಿ ಅಂಗವಾಗಿ ನವದೆಹಲಿಯ ವೀರಭೂಮಿಯಲ್ಲಿರುವ ರಾಜೀವ್ ಸ್ಮಾರಕಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪೂರ್ವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರದಿಂತೆ ಹಲವು ಗಣ್ಯರು ನಮನ ಸಲ್ಲಿಸಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ 'ರಾಜೀವ್ ಗಾಂದಿ ಅತ್ಯಂತ ಭ್ರಷ್ಟ ಎಂಬ ಹಣೆಪಟ್ಟಿ ಹೊತ್ತು ತಮ್ಮ ಜೀವನವನ್ನು ಕೊನೆಗೊಳಿಸಿದರು..' ಎಂಬ ಪ್ರಧಾನಿ ಮೋದಿ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಮೋದಿ ಹೇಳಿಕೆಯನ್ನು ಖಂಡಿಸಿದ್ದು ಇಲ್ಲಿ ಸ್ಮರಿಸಬಹುದು.

ಗೆದ್ದವರಾರು? ಬಿದ್ದವರಾರು? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.