ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದತಿ?| 35ಎ ಕಲಂ, 370ನೇ ವಿಧಿ ಹಿಂಪಡೆಯಲಿದೆ ಕೇಂದ್ರ?| ಹೆಚ್ಚುವರಿ ಸೇನೆ ನಿಯೋಜನೆಗೆ ಕಾರಣ ಏನು ಗೊತ್ತಾ?| ಕಣಿವೆ ರಾಜ್ಯದ ರಾಜಕೀಯ ಪಕ್ಷಗಳ ಮತಿಭ್ರಮಣೆ| ರಾಜ್ಯಪಾಲರನ್ನು ಭೇಟಿಯಾದ ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ನಿಯೋಗ| ಕೇಂದ್ರ ಸರ್ಕಾರದ ಸ್ಪಷ್ಟನೆಗಾಗಿ ಒತ್ತಾಯಿಸಿದ ಓಮರ್ ಅಬ್ದುಲ್ಲಾ|
ಶ್ರೀನಗರ(ಆ.03): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂಬ ವದಂತಿ, ಅಕ್ಷರಶಃ ಕಣಿವೆ ರಾಜ್ಯದ ರಾಜಕೀಯ ನಾಯಕರ ನಿದ್ದೆಗಡೆಸಿದೆ.
ಸಂವಿಧಾನದ 35ಎ ಕಲಂ ಮತ್ತು 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮತಿಭ್ರಮಣೆಯಾದಂತಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್, ಸಂವಿಧಾನದ 35ಎ ಕಲಂ ಹಾಗೂ 370ನೇ ವಿಧಿ ರದ್ದುಪಡಿಸುವ ಅಥವಾ ರಾಜ್ಯ ವಿಭಜನೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಇನ್ನು ವದಂತಿ ಕುರಿತು ಸ್ಪಷ್ಟನೆ ಕೇಳಲು ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ನಾಯಕರ ನಿಯೋಗ, ಇಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿ ಮಾಡಿದೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಓಮರ್ ಅಬ್ದುಲ್ಲಾ, ವಿಶೇಷ ಸ್ಥಾನಮಾನ ರದ್ದತಿ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಆದರೂ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅಬ್ದುಲ್ಲಾ ಒತ್ತಾಯಿಸಿದ್ದಾರೆ.
