ಬೆಂಗಳೂರು :  ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದ ‘ಓಲಾ’ ಕಂಪನಿಗೆ ಚಾಟಿ ಬೀಸಿರುವ ಸಾರಿಗೆ ಇಲಾಖೆ, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ (ಆರ್‌ಟಿಒ) ಅದು ಪಡೆದಿದ್ದ ಅಗ್ರಿಗೇಟ​ರ್ಸ್ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನುತುಗೊಳಿಸಿದೆ. ಹೀಗಾಗಿ ಶನಿವಾರದಿಂದಲೇ ರಾಜ್ಯಾದ್ಯಂತ ಓಲಾ ಕ್ಯಾಬ್‌, ಆಟೋ ಸೇವೆ ಬಂದ್‌ ಆಗಲಿದೆ.

ಓಲಾ ಸಂಸ್ಥೆ ಚಾಲಕರ ಭವಿಷ್ಯದ ಬಗ್ಗೆ ಯೋಚಿಸಬೇಕಿತ್ತು. ಇದೀಗ ಸಂಸ್ಥೆ ಮಾಡಿದ ತಪ್ಪಿನಿಂದ ಚಾಲಕರ ಸ್ಥಿತಿ ಅತಂತ್ರವಾಗಿದೆ. ನಗರದಲ್ಲಿ ಸುಮಾರು 40 ಸಾವಿರ ಚಾಲಕರು ಓಲಾ ಸಂಸ್ಥೆಯ ಪಾಲುದಾರರಾಗಿ ಕ್ಯಾಬ್‌ ಸೇವೆ ನೀಡುತ್ತಿದ್ದಾರೆ. ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಕಾರುಗಳನ್ನು ಖರೀದಿಸಿ, ಸಂಸ್ಥೆ ಜೊತೆಗೂಡಿ ಜೀವನ ದೂಡುತ್ತಿದ್ದಾರೆ. 

ಇದೀಗ ಆರು ತಿಂಗಳು ಕ್ಯಾಬ್‌ ಸೇವೆ ಸ್ಥಗಿತಗೊಳಿಸದರೆ ಚಾಲಕರು ಏನು ಮಾಡಬೇಕು? ಇನ್ನು ಮೂರು ದಿನಗಳ ವರೆಗೆ ಕಾದು ನೋಡುತ್ತೇವೆ. ಅಷ್ಟರಲ್ಲಿ ಓಲಾ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಗೊತ್ತಾಗುತ್ತದೆ. ನಂತರ ಚಾಲಕರ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಜೈ ಭಾರತ್‌ ಓಲಾ ಚಾಲಕರ ಸಂಘದ ಅಧ್ಯಕ್ಷ ಚಂದ್ರು ತಿಳಿಸಿದರು.