ನಿರಂತರವಾಗಿ ಏರುತ್ತಿದ್ದ ಪೆಟ್ರೋಲ್ ಬೆಲೆಯು ಇತ್ತೀಚೆಗೆ ಕೊಂಚ ಇಳಿಕೆ ಕಂಡಿದ್ದು, ವಾಹನ ಸವಾರರಿಗೆ ತುಸು ಸಮಾಧಾನ ನೀಡಿತ್ತು. ಆದರೀಗ ಈ ಖುಷಿ ಹೆಚ್ಚು ದಿನ ಉಳಿದುಕೊಳ್ಳುವಂತೆ ಕಾಣುತ್ತಿಲ್ಲ. ಸೌದಿ ಅರೇಬಿಯಾ ತೆಗೆದುಕೊಂಡಿರುವ ನಿರ್ಧಾರವೊಂದು ಪೆಟ್ರೋಲ್ ಡೀಸೆಲ್ ಬೆಲೆಯು ಮತ್ತೆ ಏರಿಕೆಯಾಗುವ ಸೂಚನೆ ನೀಡಿದ್ದು, ವಾಹನ ಸವಾರರಿಗೆ ತೈಲ ಏರಿಕೆಯ ಬಿಸಿ ನೀಡುವ ಸಾಧ್ಯತೆಗಳಿವೆ.

ಕಚ್ಚಾ ತೈಲದ ಬಹುದೊಡ್ಡ ರಫ್ತುಗಾರ ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಡಿಸೆಂಬರ್‌ನಿಂದ ಸೌದಿ ಅರೇಬಿಯಾ ಪ್ರತಿ ದಿನ 5 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಲಿದೆ. ಇದಾದ ಮರುಕ್ಷಣವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದ ಬೆಲೆಯು ಶೇ. 2ರಷ್ಟು ಹೆಚ್ಚಳವಾಗಿದೆ. ಹೀಗಿರುವಾಗ ಇತರ ದೇಶಗಳೂ ಸೌದಿ ಅರೇಬಿಯಾದಂತೆ ತೈಲ ಉತ್ಪಾದನೆ ಕಡಿಮೆ ಮಾಡಿದರೆ ಕಚ್ಛಾ ತೈಲ ಬೆಲೆಯು ಮತ್ತೊಮ್ಮೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ. ಭಾರತದಲ್ಲೂ ಕಡಿಮೆಯಾಗಿರುವ ಬೆಲೆ ಮತ್ತೆ ಏರಿಕೆಯಾಗಲಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಪೂರೈಕೆ ಹೆಚ್ಚಾದ ಕಾರಣ ಬೇಡಿಕೆ ಕಡಿಮೆಯಾಗಿ ತೈಲ ಬೆಲೆಯಲ್ಲಿ ಶೇ. 20ರಷ್ಟು ಕುಸಿತವಾಗಿದೆ. ಸದ್ಯ ಬ್ರೆಟ್ ಕ್ರೂಡ್ ಬೆಲೆಯು ಪ್ರತಿ ಬ್ಯಾರೆಲ್‌ಗೆ 71 ಡಾಲರ್‌ಗಿಂತಲೂ ಹೆಚ್ಚಾಗಿದೆ. ಅಕ್ಟೋಬರ್ 3 ರಂದು ಕಚ್ಚಾ ತೈಲ ಬೆಲೆಯು ಈ ವರ್ಷದ ಅತ್ಯಂತ ಗರಿಷ್ಠ ಮಟ್ಟಕ್ಕೇರಿತ್ತು.

ರಷ್ಯಾ, ಸೌದಿ ಅರೇಬಿಯಾ ಹಾಗೂ ಅಮೆರಿಕಾವು ತೈಲ ಉತ್ಪಾದನೆ ಹೆಚ್ಚು ಮಾಡಿದ್ದೇ ಬೆಲೆ ಕುಸಿತದ ಹಿಂದಿನ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ನೋ ಚಾನ್ಸ್, ಪೆಟ್ರೋಲ್ ಸುಂಕ ಕಡಿಮೆ ಮಾಡಲು ಸಾಧ್ಯವೇ ಇಲ್ಲ

ಪೆಟ್ರೋಲ್ ಡೀಸೆಲ್ ಬೆಲೆ ಹೇಗೆ ಹೆಚ್ಚಾಗುತ್ತದೆ?

ಸೌದಿ ಅರೇಬಿಯಾವು ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್ ವೇಳೆಗೆ ದಿನವೊಂದಕ್ಕೆ 5 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಕಡಿತಗೊಳಿಸಲು ಚಿಂತಿಸಿದ್ದೇವೆ ಎಂದು ಸೌದಿ ಅರೇಬಿಯಾದ ಇಂಧನ ಖಾತೆ ಸಚಿವ ಖಲೀದ್-ಅಲ್-ಫಹೇದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ನಿರ್ಧಾರದಿಂದ ಜಾಗತಿಕ ಪೂರೈಕೆಯಲ್ಲಿ ಶೇ. 0.005 ರಷ್ಟು ಇಳಿಕೆಯಾಗಲಿದೆ. ಒಂದು ವೇಳೆ ಸೌದಿ ಅರೇಬಿಯಾದಂತೆ ತೈಲ ಉತ್ಪಾದಿಸುವ ಮತ್ತೊಂದು ದೇಶವೂ ಇಂತಹುದೇ ನಿರ್ಧಾರ ಕೈಗೊಂಡರೆ ಮತ್ತೆ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳವಾಗುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಮತ್ತೆ ಇಳಿಯಿತು ಪೆಟ್ರೋಲ್, ಡೀಸೆಲ್ ದರ : ಎಷ್ಟೊಂದು ಕಮ್ಮಿ!

ಪೆಟ್ರೋಲ್ ಡೀಸೇಲ್ ಬೆಲೆ ನಿಗದಿಯಾಗುವುದು ಹೇಗೆ?

ಇಂಧನ ತಜ್ಞ ನರೇಂದ್ರ ತನೇಜಾ ಈ ಕುರಿತಾಗಿ ಮಾತನಾಡುತ್ತಾ ಆಯ್ಲ್ ಮಾರ್ಕೆಟಿಂಗ್ ಕಂಪೆನಿಗಳು ಮೂರು ಆಧಾರಗಳ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಗದಿಯಾಗುತ್ತದೆ. ಮೊದಲನೆಯದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ. ಎರಡನೆಯದಾಗಿ ಆಮದು ಮಾಡಿಕೊಳ್ಳುವ ವೇಳೆ ಡಾಲರ್ ಎದುರು ಭಾರತೀಯ ಮೌಲ್ಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್- ಡೀಸೆಲ್ ಎಷ್ಟಿದೆ ಎಂಬುವುದು ನಿರ್ಧರಿಸುತ್ತದೆ ಎಂದಿದ್ದಾರೆ.