ಬರ ಮತ್ತು ನೀರಿನಿಂದ ತತ್ತರಿಸಿರುವ ನಾಡಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸಾಥ್ ನೀಡಿರುವ ಘಟನೆ ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ನಡೆದಿದೆ.
ಹಾವೇರಿ (ಮೇ.04): ಬರ ಮತ್ತು ನೀರಿನಿಂದ ತತ್ತರಿಸಿರುವ ನಾಡಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಸಾಥ್ ನೀಡಿರುವ ಘಟನೆ ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ನಡೆದಿದೆ.
ಇಲ್ಲಿ ಅಧಿಕಾರಿಗಳ ತಂಡ ನಡೆಸಿದ ಶ್ರಮದಾನದಲ್ಲಿ ಜಿಲ್ಲಾಧಿಕಾರಿ ಗುದ್ದಲಿ ಹಿಡಿದು ಮಣ್ಣು ಅಗೆದರು. ಬುಟ್ಟಿಯಲ್ಲಿ ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ್ದಲ್ಲದೆ ಟ್ರ್ಯಾಕ್ಟರ್ ಚಲಾಯಿಸಿದರು. ಅವರೊಂದಿಗೆ ಜಿಪಂ ಸಿಇಒ, ಡಿಡಿಪಿಐ, ಡಿಎಚ್‌ಒ ಸೇರಿದಂತೆ ಜಿಲ್ಲೆಯ ೪೦ರಿಂದ ೫೦ ಹಿರಿಯ ಅಧಿಕಾರಿಗಳು ಕೈ ಜೋಡಿಸಿದರು. ಜಿಲ್ಲೆಯ ದೇವಿಹೊಸೂರು ದೊಡ್ಡಕೆರೆಯಲ್ಲಿ ಗುರುವಾರ ಈ ಕಂಡುಬಂದ ಈ ಅಪರೂಪದ ದೃಶ್ಯಕ್ಕೆ ಕಾರ್ಮಿಕರೂ ಸೇರಿದಂತೆ ಸ್ಥಳೀಯ ನಾಗರಿಕರು ಅಚ್ಚರಿ ಪಟ್ಟರು.
ಸುಮಾರು ಒಂದು ಗಂಟೆ ಶ್ರಮದಾನದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಕೂಲಿಕಾರರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಿದರು. ಜಿಪಂ ಸಿಇಒ ಕೆ.ಬಿ. ಅಂಜನಪ್ಪ, ಡಿಡಿಪಿಐ ಶಿವನಗೌಡ ಪಾಟೀಲ್, ಡಿಎಚ್‌ಒ ಡಾ. ಮಹೇಶ ಬಡ್ಡಿ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.
