ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದೆ.  ಹೀಗಾಗಿ ಮಂಗಳೂರಿನಿಂದ ಕಾರವಾರದ ವರೆಗಿನ 320 ಕಿಮೀ ಉದ್ದದ ಕರಾವಳಿಯಲ್ಲಿ ಮೀನುಗಾರರು ಹಾಗೂ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.  

ಮಂಗಳೂರು(ಡಿ.3): ಓಖಿ ಚಂಡಾಮಾರುತದ ಅಬ್ಬರಕ್ಕೆ ದೇಶದ ಕರಾವಳಿ ತೀರ ಅಕ್ಷರಶಃ ನಲುಗಿ ಹೋಗಿದೆ. ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳಿದ್ದವರ ಪಾಡು ಹೇಳ ತೀರದಂತಾಗಿದೆ. ರಕ್ಷಣಾ ಪಡೆಗಳು ಹಗಲು ರಾತ್ರಿ ಎನ್ನದೇ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. 

ಈಗಾಗಲೇ ಓಖಿ ಚಂಡಮಾರುತಕ್ಕೆ ತಮಿಳುನಾಡು, ಕೇರಳ ರಾಜ್ಯ ತತ್ತರಿಸಿದೆ. ಈಗಾಗಲೇ ನೂರಾರು ಮೀನುಗಾರರು ನಾಪತ್ತೆಯಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಸುಮಾರು 250 ಕ್ಕೂ ಹೆಚ್ಚು ಮೀನುಗಾರರ ಬೋಟ್ ಗಳು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ದೇವಘಡ ಫೋರ್ಟ್'ನಲ್ಲಿ ಪತ್ತೆಯಾಗಿವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಟ್ವೀಟ್ ಮಾಡಿದ್ದಾರೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಹೀಗಾಗಿ ಮಂಗಳೂರಿನಿಂದ ಕಾರವಾರದ ವರೆಗಿನ 320 ಕಿಮೀ ಉದ್ದದ ಕರಾವಳಿಯಲ್ಲಿ ಮೀನುಗಾರರು ಹಾಗೂ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇನ್ನೂ ಉಡುಪಿಯ ಮಲ್ಪೆ ಬೀಚ್​ನಲ್ಲೂ ಕಡಲಿನ ಆರ್ಭಟ ಜೋರಾಗಿದೆ. ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸಿಗರ ಭೇಟಿಗೆ ಕಳೆದ 24 ಗಂಟೆಗಳಿಂದ ನಿರ್ಬಂಧ ವಿಧಿಸಲಾಗಿದೆ. ಇನ್ನೂ ಕಾರವಾರದ ಅರಬ್ಬಿ ಸಮುದ್ರದಲ್ಲೂ ಕೂಡ ಭಾರೀ ಗಾಳಿ ಬೀಸುತ್ತಿದ್ದು ಅಲೆಗಗಳ ಅಬ್ಬರವೂ ಕೂಡ ಅತೀ ಹೆಚ್ಚಿದೆ. ಸಮುದ್ರದಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಪಕ್ಕದ ಗೋವಾ ಹಾಗೂ ಮುಂಬೈಯಿಂದ ಮೀನುಗಾರಿಕೆಗೆ ಬಂದಿದ್ದ ಬೋಟ್​ಗಳು ಕಾರವಾರ ದಡದಲ್ಲಿ ಲಂಗರು ಹಾಕಿವೆ. ಇದುವರೆಗೂ ಕೇರಳ ಹಾಗೂ ತಮಿಳುನಾಡು ಸೇರಿ 26 ಮಂದಿ ಓಖಿ ಚಂಡಾಮಾರುತಕ್ಕೆ ಬಲಿಯಾಗಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಇನ್ನೂ 24 ಗಂಟೆಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಕರಾವಳಿ ತೀರದ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.