ನೃಪತುಂಗ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಯಾಗಿ ಸಲು ಬಿಬಿಎಂಪಿ ಮುಂದಾಗಿದ್ದು, 45 ದಿನಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲು ಮುಂದಾಗಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.ಕಳೆದೊಂದು ವರ್ಷದಿಂದ ಟೆಂಡರ್‌ಶ್ಯೂರ್‌ ಕಾಮಗಾರಿಯಿಂದ ಆಮೆಗತಿಯಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಇದೀಗ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ಮುಂದಾಗಿ ಇಡೀ ರಸ್ತೆಯನ್ನು ಮುಚ್ಚುವುದರಿಂದ ಮತ್ತೊಮ್ಮೆ ವಾಹನ ಸವಾರರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರೊಂದಿಗೆ ವಿಧಾನಸೌಧ, ಮೆಜೆಸ್ಟಿಕ್‌, ಅರಮನೆ ರಸ್ತೆಯಂತಹ ಪ್ರಮುಖ ಭಾಗಗಳಿಂದ ಲಕ್ಷಾಂತರ ವಾಹನಗಳು ಬರುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಬೆಂಗಳೂರು(ಫೆ.23): ನೃಪತುಂಗ ರಸ್ತೆಯನ್ನು ವೈಟ್‌ ಟಾಪಿಂಗ್‌ ರಸ್ತೆಯಾಗಿ ಸಲು ಬಿಬಿಎಂಪಿ ಮುಂದಾಗಿದ್ದು, 45 ದಿನಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲು ಮುಂದಾಗಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಕಳೆದೊಂದು ವರ್ಷದಿಂದ ಟೆಂಡರ್‌ಶ್ಯೂರ್‌ ಕಾಮಗಾರಿಯಿಂದ ಆಮೆಗತಿಯಲ್ಲಿ ವಾಹನಗಳು ಸಂಚರಿಸುತ್ತಿದ್ದರಿಂದ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಇದೀಗ ರಸ್ತೆಯನ್ನು ವೈಟ್‌ಟಾಪಿಂಗ್‌ ಮಾಡಲು ಮುಂದಾಗಿ ಇಡೀ ರಸ್ತೆಯನ್ನು ಮುಚ್ಚುವುದರಿಂದ ಮತ್ತೊಮ್ಮೆ ವಾಹನ ಸವಾರರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರೊಂದಿಗೆ ವಿಧಾನಸೌಧ, ಮೆಜೆಸ್ಟಿಕ್‌, ಅರಮನೆ ರಸ್ತೆಯಂತಹ ಪ್ರಮುಖ ಭಾಗಗಳಿಂದ ಲಕ್ಷಾಂತರ ವಾಹನಗಳು ಬರುವುದರಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಬಿಬಿಎಂಪಿ ಕೈಗೆತ್ತಿಕೊಂಡಿರುವ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಕೆ.ಆರ್‌.ವೃತ್ತದಿಂದ ಕಾರ್ಪೊರೇಷನ್‌ ವೃತ್ತದವರೆಗೆ ಕೈಗೊಳ್ಳಲಾಗಿದೆ. ಇದಕ್ಕಾಗಿ ರಸ್ತೆಯನ್ನು 45 ದಿನಗಳ ಕಾಲ ಬಂದ್‌ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದ್ದು, ನೃಪತುಂಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಕಬ್ಬನ್‌ ಪಾರ್ಕ್ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲು ಮುಂದಾಗಿದೆ. ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ತೋಟಗಾರಿಕೆ ಇಲಾಖೆಯೊಂದಿಗೆ ಮಾತುಕತೆ ನಡೆಸಲು ಬಿಬಿಎಂಪಿ ಆಯುಕ್ತರು ಮುಂದಾಗಿದ್ದು, ಈಗಾಗಲೇ ಸಂಚಾರ ಸ್ಥಗಿತಗೊಳಿಸಲು ಸಂಚಾರ ಪೊಲೀಸರ ಅನುಮತಿ ಕೋರಿದ್ದಾರೆ.

ಮೊದಲ ಹಂತದ ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು, 2ನೇ ಹಂತದಲ್ಲಿ ಕೈಗೆತ್ತಿಕೊಂಡಿರುವ 50 ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ಡಾಂಬರು ಬದಲಿಗೆ ವೈಟ್‌ಟಾಪಿಂಗ್‌ ರಸ್ತೆಯನ್ನಾಗಿಸಲು ನಿರ್ಧಾರ ಕೈಗೊಂಡಿದ್ದರು. ಅದರಂತೆ ನಗರದ ವಿವಿಧ ಭಾಗದ ಒಟ್ಟು 220 ಕಿ.ಮೀ. ಉದ್ದದ 216 ರಸ್ತೆಗಳನ್ನು .800 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ಗೊಳಿಸಲು ಬಿಬಿಎಂಪಿಗೆ ಸರ್ಕಾರ ಅನುದಾನ ನೀಡಿದೆ.

ಈಗಾಗಲೇ ನಗರದ ಹಡ್ಸನ್‌ ಸರ್ಕಲ್‌ನಿಂದ ಕಸ್ತೂರಿ ಬಾ ರಸ್ತೆಯನ್ನು .2.40 ಕೋಟಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ವೈಟ್‌ಟಾಪಿಂಗ್‌ ಮಾಡಲಾಗಿದೆ. ರಸ್ತೆ ಹೆಚ್ಚುವಿಸ್ತೀರ್ಣವಾಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಎರಡು ಹಂತಗಳಲ್ಲಿ ಕಾಮಗಾರಿ ನಡೆಸಲಾಗಿತ್ತು. ಆದರೆ, ನೃಪತುಂಗ ರಸ್ತೆ ಮೊದಲೇ ವಿಸ್ತೀರ್ಣದಲ್ಲಿ ಕಡಿಮೆಯಿದ್ದು, ಇದೀಗ ಟೆಂಡರ್‌ ಶ್ಯೂರ್‌ ಕಾಮಗಾರಿಯಿಂದ ಮತ್ತಷ್ಟುಕಿರಿದಾಗಿದೆ. ಅದರ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಒಂದೇ ಹಂತದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ವೈಟ್‌ಟಾಪಿಂಗ್‌ ರಸ್ತೆ ಕನಿಷ್ಠ 25 ವರ್ಷಗಳ ಕಾಲ ಬಾಳಿಕೆ ಬರಲಿದ್ದು, ಮಳೆಗಾಲದಲ್ಲಿ ಗುಂಡಿಗಳು ಸೃಷ್ಟಿಯಾಗುವುದಿಲ್ಲ. ಹೀಗಾಗಿ 45 ದಿನಗಳ ರಸ್ತೆಯನ್ನು ಸ್ಥಗಿತಗೊಳಿಸಿ ಕಾಮಗಾರಿ ಪೂರ್ಣಗೊಳಿಸುರುವುದು ಅನಿವಾರ್ಯವಾಗಿದೆ ಎಂಬುದು ಪಾಲಿಕೆಯ ವಾದವಾಗಿದೆ.

ಪರಿಸರವಾದಿಗಳ ತೀವ್ರ ವಿರೋಧ: ಟೆಂಡರ್‌ಶ್ಯೂರ್‌, ರಸ್ತೆ ಅಗಲೀಕರಣ ಸೇರಿ ಹಲವಾರು ಕಾಮಗಾರಿಗಳಲ್ಲಿ ಮರಗಳನ್ನು ಕಡಿಯಲು ಮುಂದಾಗಿ ಹಲವಾರು ಬಾರಿ ಪರಿಸರವಾದಿಗಳ ವಿರೋಧಕ್ಕೆ ಬಿಬಿಎಂಪಿ ಗುರಿಯಾಗಿದೆ.ಇದೀಗ ನೃಪತುಂಗ ರಸ್ತೆಯನ್ನು ಕಾಂಕ್ರಿಟ್‌ ರಸ್ತೆಯನ್ನಾಗಿಸಲು ಮುಂದಾಗಿರುವ ಬಿಬಿಎಂಪಿ 45 ದಿನಗಳನ್ನು ರಸ್ತೆಯನ್ನು ಸ್ಥಗಿತಗೊಳಿಸಿ, ಆ ಮಾರ್ಗದಲ್ಲಿ ಸಾಗುತ್ತಿದ್ದ ವಾಹನಗಳನ್ನು ಕಬ್ಬನ್‌ ಪಾರ್ಕ್ ಮೂಲಕ ಸಂಚರಿಸಲು ಯೋಜನೆ ರೂಪಿಸಲು ಮುಂದಾಗಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಪಾರ್ಕ್ನಲ್ಲಿ ವಾಹನಗಳಿಗೆ ಪ್ರವೇಶ ನೀಡಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಇದೀಗ ಮತ್ತೆ ವಾಹನಗಳನ್ನು ಪಾರ್ಕ್ನೊಳಗೆ ಹಾದುಹೋಗಲು ಅವಕಾಶ ನೀಡಿದರೆ ಕಬ್ಬನ್‌ ಪಾರ್ಕ್ ಸಂಪೂರ್ಣವಾಗಿ ಮಾಲಿನ್ಯಮಯವಾಗುತ್ತದೆ. ಉದ್ಯಾನದಲ್ಲಿ ಲಕ್ಷಾಂತರ ವಾಹನಗಳು ಸಂಚಾರಿಸುವುದರಿಂದ ಪರಿಹಾರ ಹಾಗೂ ಉದ್ಯಾನದಲ್ಲಿನ ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

ಮುತ್ಯಾಲನಗರ ರೈಲ್ವೇಬ್ರಿಡ್ಜ್ ಕಾಮಗಾರಿ ಸಂಚಾರ ಸ್ಥಗಿತ

ಯಶವಂತಪುರ ಮತ್ತು ಜಾಲಹಳ್ಳಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಮುತ್ಯಾಲನಗರ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಬಳಿ ಬಿಬಿಎಂಪಿ ಹಾಗೂ ಎಸ್‌ಡಬ್ಲ್ಯೂಆರ್‌ ಸಹಯೋಗದಲ್ಲಿ ನಿರ್ಮಿಸುತ್ತಿರುವ ‘ರೈಲ್ವೆ ಓವರ್‌ ಬ್ರಿಡ್ಜ್‌'ಗೆ ಪಿಎಸ್‌ಸಿ ಸರಕಟ್ಟುಗಳನ್ನು ಅಳವಡಿಸುವ ಕಾಮಗಾರಿ ಗುರುವಾರದಿಂದ ಪ್ರಾರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಎಲ್ಲ ರೀತಿಯ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಫೆ. 23ರಿಂದ ಕಾಮಗಾರಿ ಮುಗಿಯುವತನಕ ಜೆ.ಪಿ. ಪಾರ್ಕ್ ರಸ್ತೆ ತಿರುವು ಮುರಳಿಗೋಕುಲ ಥಿಯೇಟರ್‌ ರಸ್ತೆ ಮಾರ್ಗವಾಗಿ ಮುತ್ಯಾಲಮ್ಮ ದೇವಸ್ಥಾನ, ಎಂಇಎಸ್‌, ರಿಂಗ್‌ ರಸ್ತೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿದೆ.

ಪರ್ಯಾಯ ಮಾರ್ಗಗಳು:

ಯಶವಂತಪುರ ಸಂಚಾರ ಠಾಣಾ ವ್ಯಾಪ್ತಿ: ಮತ್ತಿಕೆರೆ, ಚೌಡೇಶ್ವರಿ ಬಸ್‌ ನಿಲ್ದಾಣ, ಜೆ.ಪಿ. ಪಾರ್ಕ್ ರಸ್ತೆ ಮುಖಾಂತರ ಶಂಕರ್‌ನಾಗ್‌ ರೈಲ್ವೆ ಗೇಟ್‌-ಮುತ್ಯಾಲನಗರ, ಎಂಇಎಸ್‌, ರಿಂಗ್‌ರೋಡ್‌ ಕಡೆಗಳಿಗೆ ಸಂಚರಿಸತಕ್ಕದ್ದು. ಜಾಲಹಳ್ಳಿ ಸಂಚಾರ ಠಾಣಾ ವ್ಯಾಪ್ತಿಯ ವಾಹನಗಳು ಮಾರ್ಗಗಳು: ಜಾಲಹಳ್ಳಿ ಎಂಇಎಸ್‌, ರಿಂಗ್‌ ರಸ್ತೆಯ ಬಿಇಎಲ್‌, ಯು ಟರ್ನ ಬಳಿ, ಯು-ತಿರುವು ಪಡೆದು ಮುತ್ಯಾಲನಗರ ಕ್ಯೂ-3 ಕ್ರಾಸ್‌ ಮುಖಾಂತರ ಶಂಕರ್‌ನಾಗ್‌ ರೈಲ್ವೆ ಗೇಟ್‌ ಜೆ.ಪಿ. ಪಾರ್ಕ್ ರಸ್ತೆ ಕಡೆಗೆ ಸಂಚರಿಸಬಹುದು.ವಾಹನಗಳ ಸುಗಮ ಸಂಚಾರ ಮತ್ತು ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಚಾಲಕರು, ಸವಾರರು ಮೇಲ್ಕಂಡ ರಸ್ತೆಗಳಲ್ಲಿ ಸಂಚರಿಸಿ ಸಹಕರಿಸಲು ಕೋರಲಾಗಿದೆ.