ದುಬೈ (ಜೂ.20) : ಕರ್ನಾಟಕದ 40 ಸಾವಿರಕ್ಕೂ ಅಧಿಕ ಮಂದಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಜ್ಯುವೆಲ್ಸ್ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್, ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲಿರುವ ಭಾರತೀಯ ಮೂಲದ ಉದ್ಯೋಗಿಗಳಿಗೂ ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. 

ಬಂಧುಗಳಿಂದ ಐಎಂಎ ಕಂಪನಿ, ಅದರಲ್ಲೂ ವಿಶೇಷವಾಗಿ ‘ಹಲಾಲ್’ ಹೂಡಿಕೆ ಬಗ್ಗೆ ಮಾಹಿತಿ ಪಡೆದ ಅನಿವಾಸಿ ಭಾರತೀಯರು ಕೋಟ್ಯಂತರ ರು.ಗಳನ್ನು ತೊಡಗಿಸಿದ್ದಾರೆ. ಮನ್ಸೂರ್ ಖಾನ್ ಪರಾರಿಯಾದ ವಿಷಯ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ. ವಾರ್ಷಿಕ ಶೇ. 36 ರಷ್ಟು ಪ್ರತಿಫಲ ನೀಡುವ ಭರವಸೆ ನೀಡಿ, ಆರಂಭಿಕವಾಗಿ ಹೂಡಿಕೆ ದಾರರಿಗೆ ಅಷ್ಟೂ ಬಡ್ಡಿಯನ್ನು ಮನ್ಸೂರ್ ನೀಡಿದ್ದ. 

ಹೀಗಾಗಿ ಮನ್ಸೂರ್ ಐಎಂಎ ಕಂಪನಿಯನ್ನು ಅತಿಯಾಗಿ ನಂಬಿದ ಯುಎಇಯಲ್ಲಿ ನೆಲೆಸಿರುವ ಭಾರತೀಯರು ಕಷ್ಟಪಟ್ಟು ದುಡಿದ ಹಣವನ್ನು ಆ ಕಂಪನಿಯಲ್ಲಿ ತೊಡಗಿಸಿ ಮೋಸ ಹೋಗಿದ್ದಾರೆ. ‘ಐಎಂಎ ಕಂಪನಿ ಮುಳುಗಿರುವುದನ್ನು ಕೇಳಿ ಆಘಾತಕ್ಕೆ ಒಳಗಾಗಿದ್ದೇನೆ’ ಎಂದು  2016 ರಲ್ಲಿ ಐಎಂಎ ಕಂಪನಿಯಲ್ಲಿ 75 ಲಕ್ಷ ರು. ಹೂಡಿಕೆ ಮಾಡಿದ್ದ ದುಬೈ ನಿವಾಸಿ, ಸ್ವೀಡನ್ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿರುವ 58 ವರ್ಷದ ಫೈಯಾಜ್ ಘನಿ ಅಳಲು ತೋಡಿಕೊಳ್ಳು ತ್ತಾರೆ. 

14  ವರ್ಷಗಳ ಕಾಲ ಕುಟುಂಬದಿಂದ ದೂರವಿದ್ದು ದುಡಿದು, ಹಣ ಉಳಿತಾಯ ಮಾಡಿದ್ದೆ. ಈಗ ಹಣ ಕಳೆದುಕೊಂಡಿದ್ದೇನೆ. ತವರಿನಲ್ಲಿ ಮನೆ ನಿರ್ಮಾಣ ವನ್ನು ಈಗಷ್ಟೇ ಆರಂಭಿಸಿದ್ದೆ. ಬೆಂಗಳೂರಿನಲ್ಲಿ ಸ್ವಂತದ್ದೊಂದು ಐಟಿ ಕಂಪನಿ ತೆರೆಯುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಈಗ ಎಲ್ಲವೂ ಮುಗಿಯಿತು ಎಂದು 2015 ರಿಂದ ಈವರೆಗೆ 77 ಲಕ್ಷ ರು. ತೊಡಗಿಸಿರುವ ಅಬುಧಾಬಿ ನಿವಾಸಿ, ಮೈಸೂರಿನ ಮೊಹಮ್ಮದ್ ಅಮೀರ್ (ಹೆಸರು ಬದಲಿಸಲಾ ಗಿದೆ) ದುಃಖ ವ್ಯಕ್ತಪಡಿಸಿದ್ದಾರೆ.