ಸೃಷ್ಟಿಯನ್ನು ತಾಯಿ ಸವಿತಾರಿಂದ ತಂದೆ ಶ್ರೀರಾಮ್‌ ವಶಕ್ಕೆ ಒಪ್ಪಿಸಲು ಹೈಕೋರ್ಟ್‌ ನಿರಾಕರಿಸಿತು. ಅಗತ್ಯವಿದ್ದರೆ ತಾಯಿ ವಶದಲ್ಲಿ ಮಗು ಇರಲಿ ಎಂದು ಕೌಟುಂಬಿಕ ನ್ಯಾಯಾ​ಲಯ ಹೊರಡಿಸಿದ ಆದೇಶ ತೆರವುಗೊಳಿಸಲು ಕೋರಿ ಆ ನ್ಯಾಯಾಲಯದ ಮುಂದೆಯೇ ಶ್ರೀರಾಮ್‌ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಅಶೋಕ್‌ ಬಿ.ಹಿಂಚಿಗೇರಿ ಮತ್ತು ನ್ಯಾಯ​ಮೂರ್ತಿ ಕೆ.ಎಸ್‌.ಮುದಗಲ್‌ ಅವರಿದ್ದ ವಿಭಾಗೀಯ ಪೀಠ ಆದೇಶಿಸಿ, ಶ್ರೀರಾಮ್‌ ಅವರ ಅರ್ಜಿ ವಜಾಗೊಳಿಸಿತು.

ಬೆಂಗಳೂರು: ಅಮೆರಿಕ ಕೋರ್ಟ್‌'ವೊಂದರ ಆದೇಶ ಮುಂದಿರಿಸಿಕೊಂಡು ಬೆಂಗಳೂರಿನಲ್ಲಿ ಪತ್ನಿಯ ವಶದಲ್ಲಿರುವ ಪುತ್ರಿಯನ್ನು ತನ್ನ ಸುಪರ್ದಿಗೆ ಪಡೆಯಲೆತ್ನಿಸಿದ ವ್ಯಕ್ತಿಗೆ ಹೈಕೋರ್ಟ್‌ ನಿರಾಸೆ ಮೂಡಿಸಿದೆ. ಮಗುವಿನ ಕುರಿತ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಅಮೆರಿಕ ಕೋರ್ಟ್‌ ತನಗೆ ನೀಡಿದ ಆದೇಶವನ್ನು ಆಧರಿಸಿ ಶ್ರೀರಾಮ ಶಂಕರನ್‌ ಎಂಬುವರು ರಾಜ್ಯ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ತನ್ನ ಮೂರೂವರೆ ವರ್ಷದ ಮಗಳು ಸೃಷ್ಟಿಯನ್ನು ಪತ್ನಿ ಸವಿತಾ ಸೇತುರಾಂ ಅಮೆರಿಕ​ದಿಂದ ಬೆಂಗಳೂರಿಗೆ ಅಪಹರಿಸಿ ಕೊಂಡು ಬಂದು ಅಕ್ರಮ ಬಂಧನದಲ್ಲಿರಿಸಿಕೊಂ ಡಿದ್ದಾರೆ. ಹೀಗಾಗಿ, ಮಗಳನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿದ್ದರು.

ಆದರೆ, ಮಗಳು ತಾಯಿ ವಶದಲ್ಲಿರಬೇಕು ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾ​ಲಯ ನೀಡಿದ ಆದೇಶ ಪರಿಗಣಿಸಿದ ಹೈ​ಕೋರ್ಟ್‌, ಅಮೆರಿಕ ಕೋರ್ಟ್‌'ನ ಆದೇಶವನ್ನು ಬದಿಗೆ ಸರಿಸಿತು. ಅಮೆರಿಕ ಕೋರ್ಟ್‌ ಆದೇಶ ನೀಡಿದೆ ಎಂಬ ಕಾರಣಕ್ಕೆ ಬೆಂಗಳೂರಿನ ಕೌಟುಂಬಿಕ ನ್ಯಾಯಾ​ಲಯದ ಆದೇಶವು ಸಮರ್ಥನೀಯವಾಗಿಲ್ಲ ಎಂದು ಊಹಿಸಲಾಗದು. ವ್ಯಕ್ತಿ ಅಕ್ರಮ ಬಂಧನದಲ್ಲಿದ್ದಾಗ ಅಥವಾ ಬಂಧಿತನ ಸಾಂವಿಧಾನಿಕ ಹಕ್ಕು ಉಲ್ಲಂಘನೆಯಾಗಿದ್ದಾಗ ಮಾತ್ರ ಹೇಬಿಯಸ್‌ ಕಾರ್ಪಸ್‌ ರಿಟ್‌ ಅಧಿಕಾರ ಬಳಸಿ ನ್ಯಾಯಾಲಯವು ಬಂಧಿತನ ರಕ್ಷಣೆಗೆ ಧಾವಿಸಬೇಕಾಗುತ್ತದೆ. ಕೌಟುಂಬಿಕ ನ್ಯಾಯಾಲ​ಯದ ಆದೇಶ ಮೇರೆಗೆ ಮಗುವು ತಾಯಿಯ ವಶದಲ್ಲಿದ್ದಾಗ, ಅದನ್ನು ಮಗುವಿನ ಅಕ್ರಮ ಬಂಧನ ಎನ್ನಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸೃಷ್ಟಿಯನ್ನು ತಾಯಿ ಸವಿತಾರಿಂದ ತಂದೆ ಶ್ರೀರಾಮ್‌ ವಶಕ್ಕೆ ಒಪ್ಪಿಸಲು ಹೈಕೋರ್ಟ್‌ ನಿರಾಕರಿಸಿತು. ಅಗತ್ಯವಿದ್ದರೆ ತಾಯಿ ವಶದಲ್ಲಿ ಮಗು ಇರಲಿ ಎಂದು ಕೌಟುಂಬಿಕ ನ್ಯಾಯಾ​ಲಯ ಹೊರಡಿಸಿದ ಆದೇಶ ತೆರವುಗೊಳಿಸಲು ಕೋರಿ ಆ ನ್ಯಾಯಾಲಯದ ಮುಂದೆಯೇ ಶ್ರೀರಾಮ್‌ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಅಶೋಕ್‌ ಬಿ.ಹಿಂಚಿಗೇರಿ ಮತ್ತು ನ್ಯಾಯ​ಮೂರ್ತಿ ಕೆ.ಎಸ್‌.ಮುದಗಲ್‌ ಅವರಿದ್ದ ವಿಭಾಗೀಯ ಪೀಠ ಆದೇಶಿಸಿ, ಶ್ರೀರಾಮ್‌ ಅವರ ಅರ್ಜಿ ವಜಾಗೊಳಿಸಿತು.

ಪ್ರಕರಣವೇನು?
ಶ್ರೀರಾಮ ಶಂಕರನ್‌ 2010ರಲ್ಲಿ ಬೆಂಗಳೂರಿನ ಎಚ್‌.ಆರ್‌. ಸವಿತಾ ಸೇತುರಾಂ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. 2013ರ ನ.19ರಂದು ದಂಪತಿಗೆ ಸೃಷ್ಟಿಎಂಬ ಹೆಣ್ಣು ಮಗು ಜನಿಸಿತ್ತು. ಅಲ್ಲಿಯೇ ಹುಟ್ಟಿದ ಕಾರಣ ಮಗುವಿಗೆ ಅಮೆರಿಕದ ಪೌರತ್ವ ಸಿಕ್ಕಿತ್ತು. ಮಗುವಿಗೆ ಸದ್ಯ ಮೂರೂವರೆ ವರ್ಷ. ಈ ಮಧ್ಯೆ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ 2014ರಲ್ಲಿ ಶ್ರೀರಾಮ್‌, ಅಮೆರಿಕದ ಅರಿಜೋನಾ ಸುಪೀರಿಯರ್‌ ಕೋರ್ಟ್‌'ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರಿಜೋನಾ ಕೋರ್ಟ್‌ ಮಗಳ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಜಂಟಿ ಹಕ್ಕನ್ನು ದಂಪತಿಗೆ ನೀಡಿತ್ತು. ಆ ಪ್ರಕಾರ ಶ್ರೀರಾಮ ಅಥವಾ ಸವಿತಾರ ಪೈಕಿ ಯಾರೇ ಆಗಲಿ ಮಗಳನ್ನು ಅಮೆರಿಕದಿಂದ ಹೊರಗೆ ಕರೆದೊಯ್ದ ಪಕ್ಷದಲ್ಲಿ ಪ್ರವಾಸದ ಬಗ್ಗೆ ಪರಸ್ಪರ ಲಿಖಿತ ವಿವರ ನೀಡಬೇಕು.

ಸವಿತಾ ಅವರು ಮಗಳನ್ನು 2016ರಲ್ಲಿ ಬೆಂಗಳೂರಿನ ತನ್ನ ಪೋಷಕರ ಮನೆಗೆ ಕರೆತಂದಿದ್ದರು. 2016ರ ಅ.18 ಅಮೆರಿಕಕ್ಕೆ ಮರಳಲು ಕೊನೆಯ ದಿನವಾಗಿದ್ದರೂ ಹೋಗಿ​ರಲಿಲ್ಲ. ಹೀಗಾಗಿ, ಶ್ರೀರಾಮ್‌ ಅಮೇರಿಕ ಕೋರ್ಟ್‌'ಗೆ ತುರ್ತು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿ, ಪತ್ನಿಯು ಮಗಳನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾಳೆ ಎಂದು ದೂರಿದ್ದರು. ಇದರಿಂದ ಮಗುವನ್ನು ಕೂಡಲೇ ತನ್ನ ಮುಂದೆ ಹಾಜರುಪಡಿಸುವಂತೆ ಸವಿತಾಗೆ ಅಮೆರಿಕದ ಕೋರ್ಟ್‌ ಆದೇಶಿಸಿತ್ತು. ಮಗುವನ್ನು ಹಾಜರುಪಡಿಸದ ಕಾರಣ ಅಮೆರಿಕ ಕೋರ್ಟ್‌, ಮಗಳ ಕುರಿತಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಶ್ರೀರಾಮ್‌ ಮಾತ್ರ ಹೊಂದಿದ್ದಾರೆ ಎಂದು 2016ರ ಅ.24ರಂದು ಆದೇಶಿಸಿತ್ತು. ಮತ್ತೊಂದೆಡೆ ಸವಿತಾ ಸಲ್ಲಿಸಿದ್ದ ಅರ್ಜಿ ಮೇರೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ, ಸವಿತಾ ಹಾಗೂ ಪುತ್ರಿ ಸೃಷ್ಟಿಯ ಶಾಂತಿಯುತ ಜೀವನದಲ್ಲಿ ಶ್ರೀರಾಮ್‌ ಮಧ್ಯಪ್ರವೇಶಿಸಬಾರದು ಎಂದು 2016ರ ಅ.22ರಂದು ಆದೇಶಿಸಿತ್ತು. ಈ ವೇಳೆ ಹೈಕೋರ್ಟ್‌'ಗೆ ಶ್ರೀರಾಮ್‌ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

- ವೆಂಕಟೇಶ್ ಕಲಿಪಿ, ಕನ್ನಡಪ್ರಭ
epaper.kannadaprabha.in