ನವದೆಹಲಿ[ಆ.17]: ಕೇಂದ್ರ ಸರ್ಕಾರ ವಿಮಾ ಪಾಲಿಸಿದಾರರರಿಗೆ ಒಂದು ಶುಭ ಸಮಾಚಾರ ನೀಡಿದೆ. ಆರೋಗ್ಯ ವಿಮೆ ಮಾಡಿಸಿರುವ ಎಲ್ಲರೂ ಇನ್ನು ಮುಂದೆ ತಮ್ಮ ವಿಮೆಯಡಿ ಮಾನಸಿಕ ಆರೋಗ್ಯ ಕಾಯಿಲೆಗಳಿಗೂ ಚಿಕಿತ್ಸೆ ಪಡೆದುಕೊಳ್ಳಬಹುದು. 

ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಮಾನಸಿಕ ಆರೋಗ್ಯ ಕಾಯಿದೆ 2017ರಡಿ ತಿದ್ದುಪಡಿ ತಂದಿದೆ. ಎಲ್ಲ ವಿಮಾ ಕಂಪನಿಗಳಿಗೂ ಆದೇಶ ಹೊರಡಿಸಿದ್ದು ಆರೋಗ್ಯ ವಿಮೆಯಲ್ಲಿ ಮಾನಸಿಕ ಕಾಯಿಲೆಗಳು ಒಳಗೊಳ್ಳುತ್ತವೆ. ಸಂಬಂಧಿಸಿದ ಆಸ್ಪತ್ರೆಗಳು ವಿಮೆಯಡಿ  ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ತಿಳಿಸಿದೆ.

ಪ್ರಸ್ತುತವಿರುವ ಆರೋಗ್ಯ ವಿಮೆಯಡಿ ಮಾನಸಿಕ ಕಾಯಿಲೆ ಹೊರತುಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನ್ಯೂ ಇಂಡಿಯಾ ತರದ ವಿಮಾ ಕಂಪನಿಗಳು ಮಾತ್ರ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವ ಆಫರ್ ನೀಡುತ್ತಿದ್ದವು. ನೂತನ ಆದೇಶ ಎಲ್ಲ ವಿಮಾ ಕಂಪನಿಗಳಿಗೂ ತಕ್ಷಣದಿಂದಲೇ ಅನ್ವಯವಾಗಲಿದೆ.ಭಾರತದಂತ ದೇಶಗಳಲ್ಲಿ 18 ರಿಂದ 35 ವರ್ಷದ ವಯೋಮಾನದವರು ಹೆಚ್ಚಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಾರೆ. ಕೆಲಸದ ಒತ್ತಡ, ಆನಾರೋಗ್ಯ ಸೇರಿದಂತೆ ಮುಂತಾದ ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.