ನೀವು ಓಟ್ ಹಾಕಿದ್ದೀರಾ : ಚೀಟಿ ನೋಡಿ ಖಚಿತ ಮಾಡಿಕೊಳ್ಳಿ

First Published 11, Jan 2018, 7:40 AM IST
Now VV Pat Use in Karnataka Election
Highlights

ಚುನಾವಣಾ ಮತಯಂತ್ರದಲ್ಲಿ ಹಲವು ದೋಷಗಳಿರುವ ಕುರಿತು ಬಿಜೆಪಿಯೇತರ ರಾಜಕೀಯ ಪಕ್ಷಗಳು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರದ (ಇವಿಎಂ) ಜತೆಗೆ ವಿವಿಪ್ಯಾಟ್ (ವೋಟರ್ ವೆರಿಫೈಯೆಬಲ್ ಪೇಪರ್ ಆಡಿಟ್ ಟ್ರಾಲ್) ಅನ್ನು ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.

ಬೆಂಗಳೂರು: ಚುನಾವಣಾ ಮತಯಂತ್ರದಲ್ಲಿ ಹಲವು ದೋಷಗಳಿರುವ ಕುರಿತು ಬಿಜೆಪಿಯೇತರ ರಾಜಕೀಯ ಪಕ್ಷಗಳು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರದ (ಇವಿಎಂ) ಜತೆಗೆ ವಿವಿಪ್ಯಾಟ್ (ವೋಟರ್ ವೆರಿಫೈಯೆಬಲ್ ಪೇಪರ್ ಆಡಿಟ್ ಟ್ರಾಲ್) ಅನ್ನು ಬಳಕೆ ಮಾಡಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಪಾರದರ್ಶಕವಾಗಿ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಇವಿಎಂ ಜತೆಗೆ ವಿವಿಪ್ಯಾಟ್ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಈ ಮೂಲಕ ರಾಜಕೀಯ ಪಕ್ಷಗಳು ವ್ಯಕ್ತಪಡಿಸಿದ ಅನುಮಾನಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಕೇಂದ್ರ ಚುನಾವಣಾ ಆಯೋಗ ಮಾಡಿದೆ. ಮಾತ್ರವಲ್ಲ, ಮತದಾರರು ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ.

ಇದರ ಜತೆಗೆ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಣಕ್ಕಿಳಿಯುವ ಅಭ್ಯರ್ಥಿಗಳು ಮಾಡಬಹುದಾದ ವೆಚ್ಚವನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ. ಗರಿಷ್ಠ 28 ಲಕ್ಷ ರು.ನಷ್ಟು ವೆಚ್ಚ ಮಾಡಲು ನಿಗದಿ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 7.5 ಲಕ್ಷ ರು. ವೆಚ್ಚ ನಿಗದಿ ಮಾಡಲಾಗಿತ್ತು. ಚುನಾವಣೆ ವೇಳೆ ನಡೆಯಬಹುದಾದ ಅಕ್ರಮಗಳ ತಡೆಗೆ ಆಯೋಗವು ಹದ್ದಿನ ಕಣ್ಣಿಡಲು ಮುಂದಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಪೂರ್ವ ಸಿದ್ಧತೆ ಕೈಗೊಳ್ಳುವ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸುದೀರ್ಘ ಸಭೆಗಳನ್ನು ನಡೆಸಿದ ಬಳಿಕ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ, ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿರುವ ಕುರಿತು ವಿವರಣೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಅಗತ್ಯ ಇರುವ ಎಲ್ಲಾ ಸಿದ್ಧತೆಗಳನ್ನು ಚುನಾವಣಾ ಆಯೋಗವು ಪ್ರಾರಂಭಿಸಿದೆ. ಈ ಬಾರಿಯ ಚುನಾವಣೆಯು ಡಿಜಿಟಲ್ ಸ್ನೇಹಿ ಚುನಾವಣೆಯಾಗಲಿದೆ. ಹಲವು ರಾಜಕೀಯ ಪಕ್ಷಗಳು ಇವಿಎಂ ಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾರಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಮತಯಂತ್ರದ ಜತೆಗೆ ವಿವಿಪ್ಯಾಟ್ ಬಳಕೆ ಕಡ್ಡಾಯವಾಗಿ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿಯೂ ವಿವಿಪ್ಯಾಟ್ ಬಳಕೆ ಮಾಡಲಾಗುವುದು. ಇದು ಮತದಾರರು ಯಾರಿಗೆ ಮತ ಚಲಾಯಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡಲಿದೆ ಎಂದು ಹೇಳಿದರು.

ಪ್ರತಿ ನಾಗರಿಕರಿಗೂ ಮತ ಚಲಾಯಿಸುವ ಮತಗಟ್ಟೆಗಳ ಸಂಪೂರ್ಣ ವಿವರಗಳನ್ನೊಳಗೊಂಡ ಡಿಟಿಜಲ್ ಮ್ಯಾಪ್ ಸಿದ್ಧಪಡಿಸಲಾಗಿದೆ. ರಾಜ್ಯದ 30 ಜಿಲ್ಲೆಯ 33 ಚುನಾವಣೆ ಜಿಲ್ಲೆಗಳು, 224 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಒಂದೇ ಹಂತದಲ್ಲಿ ನಡೆಸಬೇಕೇ ಅಥವಾ 2-3 ಹಂತದಲ್ಲಿ ನಡೆಸಬೇಕೇ ಎಂಬುದರ ಕುರಿತು ಮುಂದಿನ ದಿನದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. 4.90 ಕೋಟಿ ಮತದಾರರಿದ್ದು, 56,694 ಮತಗಟ್ಟೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಸಿನ್ಹಾ ಮಾಹಿತಿ ನೀಡಿದರು.

ಪ್ರತಿ ಮತಗಟ್ಟೆ ಬಳಿ ಅಶಕ್ತರು, ವೃದ್ಧರಿಗೆ ನೆರವಾಗಲು ಗಾಲಿಕುರ್ಚಿಗಳ ವ್ಯವಸ್ಥೆ ಸೇರಿದಂತೆ ಚುನಾವಣೆ ಸಿಬ್ಬಂದಿಗೆ ಮೂಲಭೂತ ಸೌಕರ್ಯ ಒದಗಿಸಲು ಆಯೋಗ ನಿರ್ದೇಶನ ನೀಡಿದೆ. ಮತದಾರರು ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ತಮ್ಮ ಹೆಸರು ಸರಿಯಾಗಿರುವುದನ್ನು ಮೊದಲೇ ಖಾತ್ರಿಪಡಿಸಿಕೊಳ್ಳಬೇಕು.

ಹೆಸರು ಬಿಟ್ಟು ಹೋಗಿದ್ದರೆ ಹಾಗೂ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಇದು ಸಕಾಲವಾಗಿದೆ. ಪ್ರತಿಯೊಬ್ಬರು ಮತ ಚಲಾಯಿಸಬೇಕು ಮತ್ತು ಪ್ರತಿ ಮತವು ಮೌಲ್ಯಯುತವಾದುದು ಎಂಬ ನಿಲುವನ್ನು ಆಯೋಗ ಹೊಂದಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯಿಂದಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೂ ಮೊದಲು ಸಿನ್ಹಾ ನೇತೃತ್ವದ ಆಯೋಗದ ತಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಪೊಲೀಸ್ ಮುಖ್ಯಸ್ಥೆ ನೀಲಮಣಿ ರಾಜು ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು. 


ಚುನಾವಣಾ ವೆಚ್ಚ ಹೆಚ್ಚಳ: ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೆ ಚುನಾವಣಾ ವೆಚ್ಚವಾಗಿ 7.5 ಲಕ್ಷ ರು. ನಿಗದಿ ಮಾಡಿದ್ದನ್ನು ಕೇಂದ್ರ ಚುನಾವಣಾ ಆಯೋಗವು ಮೂರು ಪಟ್ಟು ಹೆಚ್ಚಳ ಮಾಡಿದೆ. ಇತ್ತೀಚೆಗೆ ಚುನಾವಣಾ ಆಯೋಗವು ಚುನಾವಣೆ ವೆಚ್ಚ ಸಂಬಂಧ ನಿಯಮವನ್ನು  ತಿದ್ದುಪಡಿ ಮಾಡಿ 28 ಲಕ್ಷ ರು.ಗೆ ನಿಗದಿ ಮಾಡಿದೆ. 

ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ವೆಚ್ಚದ ಮೇಲೆ ಚುನಾವಣಾ ಆಯೋಗವು ನಿಗಾ ವಹಿಸುತ್ತಿದೆ. ಪ್ರತಿ ಅಭ್ಯರ್ಥಿಯು 28 ಲಕ್ಷ ರು. ವೆಚ್ಚ ಮಾಡಲು ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚು ವೆಚ್ಚ ಮಾಡುವ ಬಗ್ಗೆ ಆಯೋಗದ ಅಧಿಕಾರಿಗಳು ಗಮನಿಸುತ್ತಿರುತ್ತಾರೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯೋಗದ ಚುನಾವಣಾ ವೆಚ್ಚ ವಿಭಾಗದ ಪ್ರಧಾನ ನಿರ್ದೇಶಕ ದಿಲೀಪ್ ಶರ್ಮಾ ತಿಳಿಸಿದರು.

ಅಕ್ರಮವಾಗಿ ಹಣ ವ್ಯವಹಾರ ನಡೆಯುವುದರ ಮೇಲೆ ಚುನಾವಣಾ ಅಧಿಕಾರಿಗಳ ಜತೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಕಣ್ಣಿಟ್ಟಿರುತ್ತಾರೆ. ಹಣ ಸಾಗಣೆ ಮಾಡುವುದನ್ನು ತಡೆಯಲು ಎಲ್ಲಾ ರೀತಿಯಿಂದಲೂ ಕ್ರಮ ಕೈಗೊಳ್ಳಲಾಗಿದೆ.

ರಸ್ತೆ, ರೈಲ್ವೆ ಮಾರ್ಗ ಮಾತ್ರವಲ್ಲ ವಿಮಾನ ಮೂಲಕವೂ ಹಣ ಸಾಗಣೆ ನಡೆಯುವ ಸಾಧ್ಯತೆ ಇರುವುದರಿಂದ ಎಲ್ಲಾ ಕಡೆಯೂ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಈ ಎಲ್ಲದರ ಜತೆಗೆ ರಾಜಕೀಯ ಪಕ್ಷಗಳು ನಡೆಸುವ ಸಮಾವೇಶ, ಸಭೆ, ಕಾರ್ಯಕ್ರಮಗಳ ಮೇಲೆ ಆಯೋಗದ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಮತದಾರರಿಗೆ ಯಾವುದೇ ಆಮಿಷ ಒಡ್ಡದಂತೆ ಸೂಚನೆ ನೀಡಲಾಗಿದೆ. ಇಂತಹ ಘಟನೆಗಳು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

loader