ಖಾತೆಯಲ್ಲಿ 10 ಸಾವಿರ ರು. ಮೇಲ್ಪಟ್ಟ ಮೊತ್ತ ಹೊಂದಿರುವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ, ಅಂತಹ ಗ್ರಾಮ ಪಂಚಾಯಿತಿಗಳನ್ನು ಬಡತನ ಮುಕ್ತ ಎಂದು ಘೋಷಿಸುವ ಬಗ್ಗೆ ಪರಿಶೀಲಿಸುವ ಸಾಧ್ಯತೆ ಇದೆ.

ನವದೆಹಲಿ(ನ.17) ಗ್ರಾಮ ಪಂಚಾಯಿತಿಗಳ ಬಡತನ ಮಟ್ಟ ಅಳೆಯಲು ಕೇಂದ್ರ ಸರ್ಕಾರ ಹೊಸ ಪ್ಲಾನ್ ಒಂದನ್ನು ರೂಪಿಸಿದೆ. ಇದರ ಅಡಿಯಲ್ಲಿ ಆಯಾ ಊರಿನಲ್ಲಿರುವ ಕುಟುಂಬಗಳ ಬ್ಯಾಂಕ್ ಖಾತೆಯನ್ನು ಪರಿಶೀಲಿಸಲು ಮುಂದಾಗಿದೆ.

ಖಾತೆಯಲ್ಲಿ 10 ಸಾವಿರ ರು. ಮೇಲ್ಪಟ್ಟ ಮೊತ್ತ ಹೊಂದಿರುವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ, ಅಂತಹ ಗ್ರಾಮ ಪಂಚಾಯಿತಿಗಳನ್ನು ಬಡತನ ಮುಕ್ತ ಎಂದು ಘೋಷಿಸುವ ಬಗ್ಗೆ ಪರಿಶೀಲಿಸುವ ಸಾಧ್ಯತೆ ಇದೆ.

50 ಸಾವಿರ ಗ್ರಾಮ ಪಂಚಾಯಿತಿಗಳನ್ನು ಬಡತನ ಮುಕ್ತ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಮಿಷನ್ ಅಂತ್ಯೋದಯ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಾನಮಾನ ಅಳೆಯಲು 21 ಅಂಶಗಳನ್ನು ನಿಗದಿಪಡಿಸಿದೆ. ಇದೀಗ ಅದಕ್ಕೆ ಬ್ಯಾಂಕ್ ಖಾತೆ ಪರಿಶೀಲನೆಯೂ ಸೇರ್ಪಡೆಯಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಒಂದು ಗ್ರಾಮ ಪಂಚಾಯತ್'ನಲ್ಲಿರುವ ಮಹಿಳಾ ಕಾರ್ಮಿಕರು ಅಥವಾ ಸ್ವಸಹಾಯ ಮಹಿಳೆಯರು ಅಥವಾ ಅಡುಗೆ ಅನಿಲ ಸಂಪರ್ಕ ಹೊಂದಿರುವ ಮನೆಗಳು, 12 ತಾಸು ವಿದ್ಯುತ್ ಸರಬರಾಜು, ಇಂಟರ್ನೆಟ್ ಸಂಪರ್ಕ ಅಥವಾ ಕನಿಷ್ಠ ಬಯಲು ಬಹಿರ್ದೆಸೆ ಮುಕ್ತ ಅಂಶಗಳನ್ನು ಪರಿಗಣಿಸಿ ಗ್ರಾಮ ಪಂಚಾಯಿತಿಗಳ ಸ್ಥಿತಿಗತಿ ಅಳೆಯಲು ಕೇಂದ್ರ ಸರ್ಕಾರವು ಉದ್ದೇಶಿಸಿದೆ.