Asianet Suvarna News Asianet Suvarna News

ವಿಮಾನ ನಿಲ್ದಾಣದಲ್ಲಿ ಇನ್ನು ಆರಂಭದಲ್ಲಿಯೇ ಟೋಲ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ವಾಹನಗಳು ಆರಂಭದಲ್ಲಿಯೇ ಟೋಲ್ ಪಾವತಿಸಬೇಕಿದೆ. ಇಷ್ಟು ದಿನ ವಿಮಾನ ನಿಲ್ದಾಣಕ್ಕೆ ಹೋಗಿ ಹಿಂತಿರುಗುವಾಗ ಟೋಲ್ ಕಟ್ಟಬೇಕಿತ್ತು. ಟೋಲ್ ಏಜನ್ಸಿ ಪಡೆದಿರುವ ನೂತನ ಸಂಸ್ಥೆ ಎಸ್ಸೆಲ್ ಗ್ರೂಪ್‌ನ ಎಜಿಎಂ ದೇವೇಂದರ್ ಕುಮಾರ್ ಖೋಸ್ಲಾ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

Now New Toll System In KIA Bengaluru

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ವಾಹನಗಳು ಆರಂಭದಲ್ಲಿಯೇ ಟೋಲ್ ಪಾವತಿಸಬೇಕಿದೆ. ಇಷ್ಟು ದಿನ ವಿಮಾನ ನಿಲ್ದಾಣಕ್ಕೆ ಹೋಗಿ ಹಿಂತಿರುಗುವಾಗ ಟೋಲ್ ಕಟ್ಟಬೇಕಿತ್ತು. ಟೋಲ್ ಏಜನ್ಸಿ ಪಡೆದಿರುವ ನೂತನ ಸಂಸ್ಥೆ ಎಸ್ಸೆಲ್ ಗ್ರೂಪ್‌ನ ಎಜಿಎಂ ದೇವೇಂದರ್ ಕುಮಾರ್ ಖೋಸ್ಲಾ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಹಿಂದೆ ಎಲ್ಲಾ ವಾಹನಗಳಿಗೆ ವಿಮಾನ ನಿಲ್ದಾಣಕ್ಕೆ ಟೋಲ್ ಕಟ್ಟದೇ ನೇರ ಪ್ರವೇಶ ನೀಡಲಾಗಿತ್ತು.

ವಿಮಾನ ನಿಲ್ದಾಣದಿಂದ ವಾಪಸ್ ಬರುವಾಗ ಟೋಲ್‌ನಲ್ಲಿ ಎರಡೂ ಕಡೆಯ ಟೋಲ್ ವಸೂಲು ಮಾಡಲಾಗುತ್ತಿತ್ತು. ಇನ್ನು ಮುಂದೆ ವಿಮಾನ ನಿಲ್ದಾಣ ಪ್ರವೇಶಿಸುವಾಗಲೇ ಟೋಲ್ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ರಸ್ತೆಯನ್ನು ಬಾಗಲೂರು ಬೂದಿಗೆರೆ ಮಾರ್ಗವಾಗಿ ಕಲ್ಪಿಸಲಾಗಿದೆ. ಇತ್ತೀಚೆಗೆ 105 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದಿಂದ ಮೈಲನಹಳ್ಳಿವರೆಗೆ ಹತ್ತು ಪಥದ ನೂತನ ರಸ್ತೆಗೆ ಮುಖ್ಯ ಮಂತ್ರಿಗಳು ಚಾಲನೆ ನೀಡಿದ್ದರು. ಅಂದಿನಿಂದ ಬೆಂಗಳೂರನಿಂದ ಆಗಮಿಸುವ ಎಲ್ಲ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ (ಟೋಲ್ ರಸ್ತೆಯಲ್ಲಿ) ಸುಂಕವಿಲ್ಲದೆ ನೇರವಾಗಿ ವಿಮಾನ ನಿಲ್ದಾಣ ಪ್ರವೇಶಿಸಿ, ನಂತರ ರಾಜ್ಯ ಹೆದ್ದಾರಿಯಲ್ಲಿ ಅಥವಾ ಚಿಕ್ಕಸಣ್ಣೆ ಅಥವಾ ಸಾದಹಳ್ಳಿ ಗೇಟ್ ಮೂಲಕ ಟೋಲ್ ರಸ್ತೆ ಪ್ರವೇಶಿಸಿ ಬೆಂಗಳೂರು ತಲುಪುತ್ತಿದ್ದವು.

ಈ ವ್ಯವಸ್ಥೆಯಿಂದಾಗಿ ಟೋಲ್‌ಗಳಲ್ಲಿ ಶೇ.25ರಷ್ಟು ವಾಹನ ಸಂಚಾರ ಕಡಿಮೆಯಾಗಿ ಶೇ.30 ರಷ್ಟು ಆದಾಯ ಕುಸಿತವಾಗಿತ್ತು. ಇನ್ನು ಮುಂದೆ ವಿಮಾನ ನಿಲ್ದಾಣ ಪ್ರವೇಶ ಮುನ್ನವೇ ಟೋಲ್ ವಸೂಲಿ ಮಾಡಲಾಗುತ್ತದೆ ಎಂದು ದೇವೇಂದರ್ ತಿಳಿಸಿದರು. ವಾಹನ ಚಾಲಕರು ಫಾಸ್ಟ್‌ಟ್ಯಾಗ್ ಯೋಜನೆಯಂತೆ ಮೊದಲೇ ಹಣ ಪಾವತಿಸಿ ಟೋಲ್‌ಗಳಲ್ಲಿ ವಾಹನ ನಿಲ್ಲಿಸದೇ ಸಂಚರಿಸಬಹುದಾಗಿದೆ. ಆದ್ದರಿಂದ ವಾಹನ ಚಾಲಕರು ಫಾಸ್ಟ್ ಟ್ಯಾಗ್ ಖರೀದಿಸುವ ಸಂದರ್ಭದಲ್ಲಿ ಶೇ.7.5 ವಿನಾಯಿತಿ ಪಡೆಯಬಹುದಾಗಿದೆ ಎಂದು ಪ್ರಾಜೆಕ್ಟ್ ಮ್ಯಾನೇಜರ್ ಎ.ಶ್ರೀನಿವಾಸ ಕಿರಣ್ ಕುಮಾರ್ ತಿಳಿಸಿದರು.