ಬೆಂಗಳೂರು(ಸೆ.20): ನಗರದ ಸಂಪಿಗೆ ರಸ್ತೆಯ ಮಂತ್ರಿಮಾಲ್ ಮತ್ತು ಮೆಜೆಸ್ಟಿಕ್ ನಡುವಿನ ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಕಾರಿ ಪೂರ್ಣಗೊಂಡಿದ್ದರೂ, ಸಂಚಾರ ಆರಂಭಿಸಲು ವಿಳಂಬ ಮಾಡುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮಂತ್ರಿಮಾಲ್ -ಮೆಜೆಸ್ಟಿಕ್ ಮೆಟ್ರೋ ರೈಲು ಮಾರ್ಗದಲ್ಲಿ ಶೀಘ್ರ ಸಂಚಾರ ಪ್ರಾರಂಭ ಮಾಡುವಂತೆ ಮೆಟ್ರೋ ನಿಗಮಕ್ಕೆ ನಿರ್ದೇಶಿಸುವಂತೆ ವಕೀಲ ಎ.ವಿ.ಅಮರ್‌ನಾಥ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ರವಿ ಮಳಿಮಠ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ.

ಈ ಮಾರ್ಗದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಉದ್ಘಾಟನೆಗೆ ಖರ್ಚಾಗುವ ಹಣ ಉಳಿಸುವ ಉದ್ದೇಶದಿಂದ ವರ್ಷಾಂತ್ಯಕ್ಕೆ ಆರಂಭವಾಗಲಿರುವ ದಕ್ಷಿಣ ಭಾಗದ ಮೆಟ್ರೋ ರೈಲು ಮಾರ್ಗದ ಉದ್ಘಾಟನೆ ವೇಳೆಯೇ ಈ ಮಂತ್ರಿಮಾಲ್-ಮೆಜೆಸ್ಟಿಕ್ ನಡುವಿನ ರೈಲು ಮಾರ್ಗವನ್ನೂ ಆರಂಭಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಕಾಮಗಾರಿಗೆ ಸಾವಿರಾರು ಕೋಟಿ ರು. ವ್ಯಯಿಸಿರುವ ಮೆಟ್ರೋ ನಿಗಮವು ಕೇವಲ ಉದ್ಘಾಟನೆ ವೆಚ್ಚ ಉಳಿಸುವ ಕಾರಣಕ್ಕಾಗಿ ಕಾಮಗಾರಿ ಪೂರ್ಣಗೊಂಡಿರುವ ರೈಲು ಮಾರ್ಗ ಸಂಚಾರಕ್ಕೆ ಮುಕ್ತಗೊಳಿಸುವುದಕ್ಕೆ ಹಿಂದೇಟು ಹಾಕಿತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.