ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಕಿರಿಯ ಸಹಾಯಕ ಎಂಜಿನಿಯರ್ ಶ್ರೀಶೈಲಾ ಮುದುಕಪ್ಪ ಅಂಬಲನೂರು ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೆ, ತನ್ನ ಪತ್ನಿ ಐದು ವರ್ಷಗಳ ಸೇವೆ ಪೂರ್ಣಗೊಳಿಸಿದ್ದಾರೆ. ವರ್ಗಾವಣೆ ಮಾಡುವಂತೆ ಕೋರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಬೆಂಗಳೂರು(ಅ.29): ಪತಿ-ಪತ್ನಿ ಒಂದೇ ಕಡೆ ಇರಬೇಕು ಎಂಬುದು ನಾಗರಿಕ ಮತ್ತು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, ಪತಿ-ಪತ್ನಿ ದೂರವಿದ್ದಲ್ಲಿ ಮೂಲ ಭೂತ ಹಕ್ಕು ಉಲ್ಲಂಘನೆ ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.
ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ತನ್ನ ಪತ್ನಿಯ ಹೆಸರನ್ನು ವಾರ್ಷಿಕ ವರ್ಗಾವಣೆ ಪಟ್ಟಿ ಮೊದಲ ಸ್ಥಾನದಲ್ಲಿ ಸೇರಿಸಲು ನಿರ್ದೇಶಿಸುವಂತೆ ಕೋರಿ ಪತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ನ್ಯಾಯಪೀಠ ಈ ರೀತಿ ಅಭಿಪ್ರಾಯ ಪಟ್ಟಿದೆ.
ಅರ್ಜಿದಾರರ ಮನವಿಯಂತೆ ಪತಿ-ಪತ್ನಿ ದೂರವಿದ್ದಲ್ಲಿ ಮೂಲಭೂತ ಹಕ್ಕು ಉಲ್ಲಂಘನೆಯಾಗಲಿದೆ ಎಂಬುದನ್ನು ನ್ಯಾಯಪೀಠಕ್ಕೆ ಸಾಬೀತು ಪಡಿಸುವಲ್ಲಿ ವಿಲರಾಗಿದ್ದಾರೆ. ಇದರಿಂದಾಗಿ ಅರ್ಜಿ ವಿಚಾರಣೆಗೆ ಮಾನ್ಯತೆ ಕಳೆದುಕೊಂಡಿದೆ. ಹಾಗಾಗಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ
ಕೋಲಾರ ಜಿಲ್ಲೆ ಬೂದಿಕೋಟೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿರುವ ಪತ್ನಿಯ ಹೆಸರನ್ನು ವಾರ್ಷಿಕ ವರ್ಗಾವಣೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸೇರಿಸಲು ಸೂಚನೆ ನೀಡಬೇಕು ಎಂದು ಕೋರಿ ಹುಬ್ಬಳ್ಳಿಯ ಹೆಸ್ಕಾಂನಲ್ಲಿ ಕಿರಿಯ ಸಹಾಯಕ ಎಂಜಿನಿಯರ್ ಶ್ರೀಶೈಲಾ ಮುದುಕಪ್ಪ ಅಂಬಲನೂರು ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುತ್ತಾರೆ. ಅಲ್ಲದೆ, ತನ್ನ ಪತ್ನಿ ಐದು ವರ್ಷಗಳ ಸೇವೆ ಪೂರ್ಣಗೊಳಿಸಿದ್ದಾರೆ. ವರ್ಗಾವಣೆ ಮಾಡುವಂತೆ ಕೋರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಆದರೆ,ವರ್ಗಾವಣೆ ಪಟ್ಟಿಯಲ್ಲಿ ತನ್ನ ಪತ್ನಿಯ ಹೆಸರು 235ನೇ ಕ್ರಮ ಸಂಖ್ಯೆಯಲ್ಲಿದೆ. ಈ ಅಂಶ ಗಮನಕ್ಕೆ ಬಂದ ಬಳಿಕ ಮತ್ತೊಂದು ಮನವಿ ಸಲ್ಲಿಸಲಾಗಿರುತ್ತದೆ. ಆದರೂ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ನಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತಿದ್ದು, ವರ್ಗಾವಣೆ ಪಟ್ಟಿಯಲ್ಲಿ ನನ್ನ ಪತ್ನಿಯ ಹೆಸರನ್ನು ಮೊದಲ ಸ್ಥಾನದಲ್ಲಿ ಸೇರಿಸುವಂತೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.
