ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ತಿಹಾರ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ | ಜೈಲೂಟ ಹಿಡಿಸದೇ 4 ಕೆಜಿ ಕಳೆದುಕೊಂಡಿದ್ದಾರೆ ಚಿದು | 

ನವದೆಹಲಿ (ಅ. 04): ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ದೆಹಲಿಯ ತಿಹಾರ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂಗೆ ಜೈಲೂಟ ಹಿಡಿಯುತ್ತಿಲ್ಲ. ಇದರಿಂದ ಅವರ ದೇಹದ ತೂಕ 4 ಕೇಜಿ ಇಳಿಕೆ ಕಂಡಿದೆ ಎಂದು ಸುಪ್ರೀಂಕೋರ್ಟ್‌ಗೆ ಗುರುವಾರ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಸ್ವತಃ ಚಿದು ವಾದಿಸಿದ್ದಾರೆ.

ವೈಷ್ಣೋದೇವಿಗೆ ‘ವಂದೇ ಭಾರತ’; ಇದು ನವರಾತ್ರಿ ಉಡುಗೊರೆ

ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ. ಈ ನಡುವೆ ದೆಹಲಿ ವಿಶೇಷ ನ್ಯಾಯಾಧೀಶರು ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅ.17 ರವರೆಗೂ ವಿಸ್ತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಅವಧಿ ವಿಸ್ತರಿಸಬೇಕು ಎಂಬ ಸಿಬಿಐ ಕೋರಿಕೆ ಮೇರೆಗೆ ಅವಧಿ ವಿಸ್ತರಿಸಲಾಗಿದೆ. ಇದರಿಂದ ಕಾಂಗ್ರೆಸ್‌ ಹಿರಿಯ ನಾಯಕ ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸುವಂತಾಗಿದೆ. ಈ ನಡುವೆ, ನಿತ್ಯ ಒಂದು ಬಾರಿ ಮನೆಯೂಟ ಪಡೆಯಲು ಚಿದಂಬರಂ ಅವರಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು ನಿರಾಕರಿಸಿ, ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿರುವ ದೆಹಲಿ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಕಾಂಗ್ರೆಸ್‌ ಹಿರಿಯ ನಾಯಕ ಐಎನ್‌ಎಕ್ಸ್‌ ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಸಲ್ಲಿಸಿರುವ ಅರ್ಜಿಯಲ್ಲಿ ಈ ವಾದ ಮಂಡಿಸಿದ್ದಾರೆ.

ತಿಹಾರ್‌ ಜೈಲಿನಲ್ಲಿ ನೀಡಲಾಗುತ್ತಿರುವ ಆಹಾರ ಅಡ್ಜಸ್ಟ್‌ ಆಗದ ಕಾರಣ ಆರೋಗ್ಯದಲ್ಲಿ ವ್ಯತ್ಯಯವಾಗಿ, 4 ಕೇಜಿ ತೂಕ ಇಳಿಕೆಯಾಗಿದೆ. ಇದರಿಂದ ಮನೆಯ ಊಟಕ್ಕೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.