ವಾಷಿಂಗ್ಟನ್‌[ಜು.22]: ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅಮೆರಿಕಕ್ಕೆ ಆಗಮಿಸಿದ ಇಮ್ರಾನ್‌ಖಾನ್‌ಗೆ ಭಾನುವಾರ ಭಾರೀ ಮುಖಭಂಗವಾಗಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗಿನ ಭೇಟಿಯಾಗಿ ಆಗಮಿಸಿದ ಇಮ್ರಾನ್‌ರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅಮೆರಿಕದ ಯಾವುದೇ ಸಚಿವರಾಗಲೀ, ಅಧಿಕಾರಿಗಳಾಗಲೀ ಹಾಜರಿರಲಿಲ್ಲ. ಬದಲಾಗಿ ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಅವರೇ ಇಮ್ರಾನ್‌ರನ್ನು ಸ್ವಾಗತಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆ ಹರಾಜಾಗಿದೆ.

ಸಾಮಾನ್ಯವಾಗಿ ಯಾವುದೇ ದೇಶದ ಗಣ್ಯರು ಆಗಮಿಸಿದ ವೇಳೆ, ಅವರ ಘನತೆಯನ್ನು ಆಧರಿಸಿ ಸ್ವತಃ ಅತಿಥಿ ದೇಶದ ಪ್ರಧಾನಿ ಅಥವಾ ಹಿರಿಯ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಖುದ್ದು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು ಸ್ವಾಗತ ಕೋರುವುದು ಸಂಪ್ರದಾಯ. ಆದರೆ ಭಯೋತ್ಪಾದನೆ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಹೊಂದಿರುವ ಪಾಕಿಸ್ತಾನದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲಿನಿಂದಲೂ ತಾತ್ಸಾರ ಧೋರಣೆ ಹೊಂದಿದ್ದಾರೆ. ಇದೇ ಕಾರಣಕ್ಕಾಗಿಯೇ, ಇಮ್ರಾನ್‌ರನ್ನು ಸ್ವಾಗತಿಸಲು ಯಾರನ್ನೂ ಕಳುಹಿಸಿಲ್ಲ ಎನ್ನಲಾಗಿದೆ.

ಅಮೆರಿಕಕ್ಕೆ ತೆರಳವು ಮೂರು ದಿನಗಳ ಮೊದಲಷ್ಟೇ, ಮುಂಬೈ ದಾಳಿಯ ರೂವಾರಿ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಬಂಧಿಸಿತ್ತು. ಆದರೆ ತನ್ನನ್ನು ತೃಪ್ತಗೊಳಿಸಲು ಮಾಡುವ ಇಂಥ ಯಾವುದೇ ಯತ್ನ ಫಲಕೊಡದು. ಉಗ್ರರ ವಿರುದ್ಧ ಪಾಕ್‌ ಕಠಿಣ ಕ್ರಮಗಳನ್ನು ಕೈಗೊಂಡು ತೋರಿಸಬೇಕು ಎನ್ನುವ ಮೂಲಕ ಪಾಕಿಸ್ತಾನಕ್ಕೆ ಅಮೆರಿಕ ತಿರುಗೇಟು ನೀಡಿತ್ತು. ಅದರ ಬೆನ್ನಲ್ಲೇ ಈ ಮುಜುಗರದ ಘಟನೆ ನಡೆದಿದೆ.