ಬೆಂಗಳೂರು[ಜು.17]: ಸುಪ್ರೀಂ ಅಂಗಳ ತಲುಪಿದ್ದ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಪ್ರಟಿಸಿದೆ. ಅತೃಪ್ತರು ವರ್ಸಸ್ ಸ್ಪೀಕರ್ ನಡುವಿನ ಈ ಜಟಾಪಟಿಯಲ್ಲಿ ಸುಪ್ರೀಂಕೋರ್ಟ್ ಎಲ್ಲರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ.

ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಅತೃಪ್ತ ಶಾಸಕರ ರಾಜೀನಾಮೆ ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ಗೆ ಕಾಲಮಿತಿ ನಿಗಧಿಪಡಿಸುವಂತಿಲ್ಲ. ವಿಶ್ವಾಸ ಮತ ಯಾಚಿಸಿದರೂ ಅತೃಪ್ತ 15 ಶಾಸಕರು ಇದರಲ್ಲಿ ಭಾಗಿಯಾಗಬೇಕೆಂದಿಲ್ಲ, ಅಲ್ಲದೇ ಈಗಾಗಲೇ ಜಾರಿಗೊಳಿಸಿರುವ ವಿಪ್ ಇವರಿಗೆ ಅನ್ವಯಿಸುವುದಿಲ್ಲ ಎಂದು ಆದೇಶಿಸಿದೆ. 

ಆಡಳಿತಾರೂಢ ಕಾಂಗ್ರೆಸ್‌-ಜೆಡಿಎಸ್‌ನ 16 ಶಾಸಕರ ರಾಜೀನಾಮೆಯೊಂದಿಗೆ ಸೃಷ್ಟಿಯಾಗಿರುವ ರಾಜ್ಯ ರಾಜಕೀಯದ ಬೃಹನ್ನಾಟಕದಲ್ಲಿ ಅಡಕವಾಗಿರುವ ಕಾನೂನು ಅಂಶಗಳು, ಸಾಂವಿಧಾನಿಕ ವಿಚಾರಗಳ ಕುರಿತು ಮಂಗಳವಾರ 3 ಗಂಟೆ 45 ನಿಮಿಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಆದೇಶವನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾದಿರಿಸಿತ್ತು. ಸದ್ಯ ಸುಪ್ರೀಂ ತೀರ್ಪು ಎಲ್ಲರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ.

ಸುಪ್ರೀಂ ತೀರ್ಪಿನ 10 ಅಂಶಗಳು!

* ನಿರ್ದಿಷ್ಟ ಸಮಯದಲ್ಲಿ ಸ್ಪೀಕರ್ ರಾಜೀನಾಮೆ ನಿರ್ಧರಿಸಬೇಕು

* ಶಾಸಕರು ಅಧಿವೇಶನಕ್ಕೆ ಹಾಜರಾಗುವುದು ಕಡ್ಡಾಯವಲ್ಲ

* ಕಲಾಪದಲ್ಲಿ ಭಾಗವಹಿಸುವುದು ಬಿಡುವುದು ಶಾಸಕರಿಗೆ ಬಿಟ್ಟಿದ್ದು

* ಆರ್ಟಿಕಲ್ 190 ಪ್ರಕಾರ ರಾಜೀನಾಮೆ ಪ್ರಕ್ರಿಯೆ ಇತ್ಯರ್ಥಪಡಿಸಿ

* ನಿಗದಿತ ಸಮಯದಲ್ಲಿ ರಾಜೀನಾಮೆ ಅಂಗೀಕರಿಸಬೇಕು

* ಅನರ್ಹತೆ ಬಗ್ಗೆಯೂ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬಹುದು

* ಸ್ಪೀಕರ್ ತೀರ್ಮಾನ ಕೈಗೊಳ್ಳುವವರೆಗೂ ಒತ್ತಾಯಿಸುವಂತಿಲ್ಲ

* ರಾಜೀನಾಮೆ ಇತ್ಯರ್ಥಪಡಿಸುವವರೆಗೂ ಸದನಕ್ಕೆ ಹಾಜರಾಗಬೇಕಿಲ್ಲ

* ಸಂವಿಧಾನದ ಪ್ರಶ್ನೆಗಳ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ

* ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರವನ್ನು ಸುಪ್ರೀಂಗೆ ತಿಳಿಸಲಿ

ಅತೃಪ್ತರಿಗಿಲ್ಲ ಭೀತಿ!: ಪತನದಂಚಿನಲ್ಲಿ ಸರ್ಕಾರ

ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗದ ಹಿನ್ನೆಲೆಯಲ್ಲಿ ಶಾಸಕರಿಗೆ ಅನರ್ಹತೆ ಭೀತಿ ಇಲ್ಲ. ನಾಳೆ ವಿಶ್ವಾಸಮತಯಾಚನೆ ವೇಳೆ 15 ಶಾಸಕರು ಹಾಜರಾಗಬೇಕಿಲ್ಲ. ಆದರೆ ಸುಪ್ರೀಂ ಈ ತೀರ್ಪಿನಿಂದ ಸರ್ಕಾರ ಪತನಗೊಳ್ಳುವುದು ಖಚಿತವಾಗಿದೆ. ವಿಶ್ವಾಸಮತದ ವೇಳೆ ಸರ್ಕಾರಕ್ಕೆ ಬಹುಮತ ಇಲ್ಲವಾದರೆ ಮೈತ್ರಿ ಸರ್ಕಾರದ ಅಂತ್ಯ ಖಚಿತ. ಸರ್ಕಾರ ಉಳಿಯಬೇಕಾದರೆ ಅತೃಪ್ತ ಶಾಸಕರು ಬರಲೇಬೇಕು. ಆದರೆ ಅದು ಕಷ್ಟಸಾಧ್ಯ

ಮಂಗಳವಾರ ಏನೇನಾಗಿತ್ತು?

‘ನಮ್ಮ ರಾಜೀನಾಮೆ ಅಂಗೀಕರಿಸುತ್ತಿಲ್ಲ, ನಾವು ಸ್ವಯಂ ಪ್ರೇರಿತವಾಗಿ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ ಅವರಿಗೆ ಸೂಚಿಸಬೇಕು’ ಎಂದು ಮೊದಲಿಗೆ ಹತ್ತು, ಬಳಿಕ ಐವರು ಶಾಸಕರು ಸಲ್ಲಿಸಿರುವ ಅರ್ಜಿ ಹಾಗೂ ‘ರಾಜೀನಾಮೆ ಅಂಗೀಕಾರಕ್ಕೂ ಮುಂಚಿತವಾಗಿ ತಾನು ಕೆಲ ಸಾಂವಿಧಾನಿಕ ಬಾಧ್ಯತೆಗಳನ್ನು ನಿರ್ವಹಿಸಬೇಕಿದೆ’ ಯ್ಎಂ.ದು ಸ್ಪೀಕರ್‌ ರಮೇಶ್‌ ಕುಮಾರ್‌ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್, ನ್ಯಾ| ದೀಪಕ್‌ ಗುಪ್ತಾ, ನ್ಯಾ| ಅನಿರುದ್ಧ ಬೋಸ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ಮಂಗಳವಾರ ವಿವರವಾದ ವಿಚಾರಣೆ ನಡೆಸಿತು.

ಜು.12ರಂದು ವಿಚಾರಣೆ ನಡೆಸಿದ ಕೋರ್ಟ್‌ ಜುಲೈ 16ರಂದು ಪ್ರಕರಣದ ಕುರಿತು ವಿವರವಾಗಿ ವಿಚಾರಣೆ ನಡೆಸುವುದಾಗಿ ಹೇಳಿ, ಅಲ್ಲಿಯವರೆಗೆ ರಾಜೀನಾಮೆ ನೀಡಿರುವ ಶಾಸಕರ ಅನರ್ಹತೆ ಮತ್ತು ರಾಜೀನಾಮೆ ಸ್ವೀಕಾರ/ನಿರಾಕರಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸ್ಪೀಕರ್‌ಗೆ ಸೂಚಿಸಿ ಯಥಾಸ್ಥಿತಿ ಆದೇಶ ನೀಡಿತ್ತು.

ಅನರ್ಹತೆ ವ್ಯಾಪ್ತಿ ಪ್ರಕರಣವಲ್ಲ: ಅದರಂತೆ ಮಂಗಳವಾರ ದೂರುದಾರ ಶಾಸಕರ ಪರ ಹಿರಿಯ ವಕೀಲ ಮುಕುಲ… ರೋಹಟ್ಗಿ ವಾದ ಮಂಡಿಸಿ , ದೇಶದಲ್ಲಿ ಸುಪ್ರೀಂ ಕೋರ್ಟ್‌ ಸುಪ್ರೀಂ ಆಗಿದ್ದು ಸ್ಪೀಕರ್‌ ಅವರಿಗೆ ನಿರ್ದೇಶನ ನೀಡುವ ಎಲ್ಲ ಅಧಿಕಾರ ನ್ಯಾಯಾಲಯಕ್ಕಿದೆ. ಅನರ್ಹತೆಯ ದೂರು ವಿಚಾರಣೆಗೆ ಬಾಕಿ ಇರುವುದು ರಾಜೀನಾಮೆ ಅಂಗೀಕಾರಕ್ಕೆ ಅಡ್ಡಿಯಾಗಲ್ಲ. ಎಲ್ಲ ಶಾಸಕರು ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದು ಯಾರ ಹಣೆಗೂ ಬಂದೂಕು ಇಟ್ಟು ರಾಜೀನಾಮೆಗೆ ಒತ್ತಡ ಹೇರಿಲ್ಲ. ರಾಜೀನಾಮೆ ಮೂಲಭೂತ ಹಕ್ಕು. ಅತೃಪ್ತ ಶಾಸಕರು ಪಕ್ಷಾಂತರ ಮಾಡಿಲ್ಲ, ಇದು ಅನರ್ಹತೆ ವ್ಯಾಪ್ತಿಯ ಪ್ರಕರಣವೇ ಅಲ್ಲ ಎಂದು ವಾದಿಸಿದರು.

ರೋಹಟ್ಗಿ ವಾದವನ್ನು ತಳ್ಳಿ ಹಾಕಿದ ಸ್ಪೀಕರ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪರ ಹಿರಿಯ ವಕೀಲ ರಾಜೀವ್‌ ಧವನ್‌ ಪ್ರತಿವಾದ ಮಂಡಿಸಿದರು. ಅಭಿಷೇಕ್‌ ಸಿಂಘ್ವಿ ವಾದಿಸಿ, ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಈ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅನರ್ಹತೆಯ ದೂರು ಮೊದಲು ಇತ್ಯರ್ಥವಾಗಬೇಕು ಎಂದರು. ಜತೆಗೆ ನ್ಯಾಯಾಲಯ ಸೂಚಿಸಿದರೆ ಸ್ಪೀಕರ್‌ ಬುಧವಾರವೇ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಮಂತ್ರಿ ಸ್ಥಾನದ ಆಮಿಷಕ್ಕೆ ರಾಜೀನಾಮೆ: ಮುಖ್ಯಮಂತ್ರಿ ಪರ ಹಿರಿಯ ವಕೀಲ ರಾಜೀವ್‌ ಧವನ್‌, ಇದೊಂದು ವ್ಯಕ್ತಿಯ ರಾಜೀನಾಮೆಯಲ್ಲ, ಮಂತ್ರಿ ಸ್ಥಾನದ ಆಮಿಷದಿಂದ ರಾಜೀನಾಮೆ ನೀಡಲಾಗಿದೆ. ಒಬ್ಬೊಬ್ಬರೇ ರಾಜೀನಾಮೆ ನೀಡಿ ಒಟ್ಟಾಗಿ ಮುಂಬೈಗೆ ಹೋಗಿ ಹೋಟೆಲ… ಸೇರಿಕೊಂಡಿದ್ದಾರೆ. ಆದ್ದರಿಂದ ಈ ರಾಜೀನಾಮೆಗಳ ಹಿಂದಿರುವ ಉದ್ದೇಶದ ಬಗ್ಗೆ ಸ್ಪೀಕರ್‌ ಪರಾಮರ್ಶೆ ಮಾಡಬೇಕು. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯ ವ್ಯಾಪ್ತಿಯ ಪ್ರಕರಣವಲ್ಲ. ರಾಜೀನಾಮೆ ನೀಡಿರುವ ಶಾಸಕರು ಸಂವಿಧಾನದ 10ನೇ ಪರಿಚ್ಛೇದದಡಿ ಅನರ್ಹತೆಗೆ ಒಳಪಡುತ್ತಾರೆಯೇ ಇಲ್ಲವೇ ಎಂಬುದನ್ನು ಸ್ಪೀಕರ್‌ ನಿರ್ಧರಿಸಬೇಕಿದೆ ಎಂದು ವಾದಿಸಿದರು. ವಾದ, ಪ್ರತಿವಾದವನ್ನು ಆಲಿಸಿದ ಪೀಠವು ಅಂತಿಮವಾಗಿ ಬುಧವಾರ ಆದೇಶ ನೀಡುವುದಾಗಿ ಪ್ರಕಟಿಸಿತ್ತು.