ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಪ್ರಕಟವಾಗುವ ದಿನ ಹತ್ತಿರವಾಗುತ್ತಿದ್ದಂತೆಯೇ ಪಕ್ಷದ ಸುಮಾರು 8ರಿಂದ 15 ಮಂದಿ ಹಾಲಿ ಶಾಸಕರಿಗೆ ನಡುಕ ಹೆಚ್ಚಾಗಿದೆ.

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಪ್ರಕಟವಾಗುವ ದಿನ ಹತ್ತಿರವಾಗುತ್ತಿದ್ದಂತೆಯೇ ಪಕ್ಷದ ಸುಮಾರು 8ರಿಂದ 15 ಮಂದಿ ಹಾಲಿ ಶಾಸಕರಿಗೆ ನಡುಕ ಹೆಚ್ಚಾಗಿದೆ.

ಏಕೆಂದರೆ, ಇತ್ತೀಚೆಗೆ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಸುಮಾರು 8ರಿಂದ 15 ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರವನ್ನು ‘ಕೆಂಪು ಪಟ್ಟಿ’ಗೆ ಸೇರಿಸಲಾಗಿದೆ. ಕೆಂಪು ಪಟ್ಟಿಯಲ್ಲಿರುವ ಈ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರ ಹೈಕಮಾಂಡ್‌ನೊಂದಿಗೆ ಪ್ರತ್ಯೇಕವಾಗಿ ಚರ್ಚೆಯಾಗಲಿದೆ.

ಮೊದಲ ಪಟ್ಟಿಯಲ್ಲೇ ಈ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಅಭ್ಯರ್ಥಿ ಪ್ರಕಟಿಸುವುದಿಲ್ಲ. ಆದರೆ, ಈ ಶಾಸಕರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂಬ ತೀರ್ಮಾನವಾದರೆ ಪರ್ಯಾಯ ಅಭ್ಯರ್ಥಿಗೆ ಸೂಚ್ಯವಾಗಿ ಈ ಮಾಹಿತಿ ನೀಡುವ ಮತ್ತು ಬಂಡಾಯವೇಳದಂತೆ ಈ ಶಾಸಕರನ್ನು ಮನವೊಲಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಆರಂಭಿಸಲಿದೆ.