Asianet Suvarna News Asianet Suvarna News

ರೇಣುಕಾಚಾರ್ಯ , ಬೇಳೂರಿಗೆ ಸಂಘದ ವಿರೋಧ

ಕಳೆದ ವಿಧಾನಸಭಾ ಅವಧಿಯಲ್ಲಿ ತಮ್ಮ ಹೇಳಿಕೆ, ನಡವಳಿಕೆಗಳಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದ್ದ ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡದೆ ಇರುವುದು ಸೂಕ್ತ ಎಂಬ ಸಲಹೆಯನ್ನು ಸಂಘ ಪರಿವಾರದ ಮುಖಂಡರು ಬಿಜೆಪಿಗೆ ನೀಡಿದ್ದಾರೆ.

No Ticket For Renukacharya And Beluru Gopalakrishna

ಬೆಂಗಳೂರು (ಜ.05): ಕಳೆದ ವಿಧಾನಸಭಾ ಅವಧಿಯಲ್ಲಿ ತಮ್ಮ ಹೇಳಿಕೆ, ನಡವಳಿಕೆಗಳಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದ್ದ ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡದೆ ಇರುವುದು ಸೂಕ್ತ ಎಂಬ ಸಲಹೆಯನ್ನು ಸಂಘ ಪರಿವಾರದ ಮುಖಂಡರು ಬಿಜೆಪಿಗೆ ನೀಡಿದ್ದಾರೆ. ಎಂ.ಪಿ.ರೇಣುಕಾಚಾರ್ಯ (ಹೊನ್ನಾಳಿ), ಬೇಳೂರು ಗೋಪಾಲಕೃಷ್ಣ (ಸಾಗರ), ಬಿ.ಪಿ. ಹರೀಶ್ (ಹರಿಹರ), ಎಂ. ವಿ. ನಾಗರಾಜು (ನೆಲಮಂಗಲ), ಜಿ.ಎನ್. ನಂಜುಂಡಸ್ವಾಮಿ (ಕೊಳ್ಳೇಗಾಲ) ಮೊದಲಾದವರ ಹೆಸರನ್ನು ಸಂಘ ಪರಿವಾರದ ಮುಖಂಡರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಮುಖಂಡರು ಮತ್ತೊಮ್ಮೆ ಆಯ್ಕೆಯಾಗಿ ಬಂದ ಮೇಲೂ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ವಿಶ್ವಾಸವಿಲ್ಲ. ಮೇಲಾಗಿ, ಆಯಾ ಕ್ಷೇತ್ರಗಳಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಟಿಕೆಟ್ ನೀಡುವ ಮೂಲಕ ಕಾರ್ಯಕರ್ತರಿಗೆ ಉತ್ತಮ ಸಂದೇಶ ರವಾನಿಸಬೇಕು ಎಂಬ ಮಾತನ್ನು ಸಂಘ ಪರಿವಾರದ ಮುಖಂಡರು ತಮ್ಮ ಪ್ರಸ್ತಾಪಕ್ಕೆ ಪೂರಕವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಆದರೆ, ಸಂಘ ಪರಿವಾರದ ಈ ಸಲಹೆಯನ್ನು ರಾಜ್ಯ ಬಿಜೆಪಿ ನಾಯಕರು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಪಕ್ಷದ ರಾಷ್ಟ್ರೀಯ ಮುಖಂಡರು ಈ ವಿಚಾರವಾಗಿ ಮನಸ್ಸು ಮಾಡಿದಲ್ಲಿ ತೀರ್ಮಾನ ಹೊರಬೀಳಬಹು ದಾಗಿದೆ. ಈ ಪಟ್ಟಿಯಲ್ಲಿರುವವರ ಪೈಕಿ ಬಹುತೇಕರು ಈಗಾಗಲೇ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆಯನ್ನೂ ಆರಂಭಿಸಿದ್ದಾರೆ. ಇವರೆಲ್ಲ ಯಡಿಯೂರಪ್ಪ ಅವರಿಗೆ ಆಪ್ತರು ಎನ್ನುವುದು ಗಮನಾರ್ಹ. ಹೀಗಾಗಿ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತಾರಾ ಎಂಬುದೇ ಪ್ರಶ್ನೆ.

ಹಾಗೆ ನೋಡಿದರೆ ಇತ್ತೀಚೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಯಡಿಯೂರಪ್ಪ ಅವರು ರೇಣುಕಾಚಾರ್ಯ ಅವರನ್ನು ಹೆಚ್ಚಿನ ಮತಗಳ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರುವಂತೆ ನೆರೆದಿದ್ದ ಜನರನ್ನು ಕೋರುವ ಮೂಲಕ ಅವರನ್ನೇ ಕಣಕ್ಕಿಳಿಸುವ ಮುನ್ಸೂಚನೆಯನ್ನು ನೀಡಿದ್ದರು. ಇದು ಆ ವೇಳೆ ಗದ್ದಲಕ್ಕೂ ಕಾರಣವಾಗಿತ್ತು. ನಂತರ ಪಕ್ಷದ ಕೆಲವು ಹಿರಿಯ ನಾಯಕರೂ ಯಡಿಯೂರಪ್ಪ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಅದರ ಪರಿಣಾಮವೇನೊ ಎಂಬಂತೆ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಟಿಕೆಟ್ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಬ ಫರ್ಮಾನು ಹೊರಡಿಸಿದ್ದರು. ರಾಜ್ಯ ಮುಖಂಡರು ಟಿಕೆಟ್ ಬಗ್ಗೆ ಬಹಿರಂಗವಾಗಿ ಭರವಸೆ ನೀಡುವಂತಿಲ್ಲ ಎಂದು ಸೂಚಿಸಿದ್ದರು. ರೇಣುಕಾಚಾರ್ಯ, ಬೇಳೂರು ಗೋಪಾಲ ಕೃಷ್ಣ, ಹರೀಶ್, ನಾಗರಾಜು ಮತ್ತು ನಂಜುಂಡ ಸ್ವಾಮಿ ಅವರು ಕಳೆದ ವಿಧಾನಸಭಾ ಅವಧಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಸಾಕಷ್ಟು ಚಟುವಟಿಕೆಯಲ್ಲಿ ನಿರತರಾಗಿದ್ದರು.

ಆಗ ನಡೆಯುತ್ತಿದ್ದ ಬೆಳವಣಿಗೆಗಳಿಗೆ ತಕ್ಕಂತೆ ಮಾಧ್ಯಮಗಳಲ್ಲಿ ತರೇಹವಾರಿ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೂ ಮುಜುಗರ ಉಂಟು ಮಾಡಿದ್ದರು. ಆ ಸಂದರ್ಭದಲ್ಲೇ ಸಂಘ ಪರಿವಾರದವರು ಈ ಮುಖಂಡರ ನಡವಳಿಕೆಗೆ ಬ್ರೇಕ್ ಹಾಕುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದರು. ಇದೇ ವೇಳೆ ಸಂಘ ಪರಿವಾರದ ಮುಖಂಡರು ಸೊರಬ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೂ ಟಿಕೆಟ್ ನೀಡುವ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios