ಬೀಜಿಂಗ್‌/ವಾಷಿಂಗ್ಟನ್‌ [ಆ.10]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಕೆಂಡಕಾರುತ್ತಿರುವ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲು ಅದರ ‘ಪರಮಾಪ್ತ ಮಿತ್ರ ದೇಶ’ ಚೀನಾ, ಅಮೆರಿಕ ಹಾಗೂ ವಿಶ್ವಸಂಸ್ಥೆಗಳು ನಿರಾಕರಿಸಿವೆ.

ನೀವೇ ಮಾತಾಡಿಕೊಳ್ಳಿ: 370 ವಿಚಾರದಲ್ಲಿ ನೆರವು ಕೇಳಲು ತನ್ನ ಆಪ್ತಮಿತ್ರ ದೇಶ ಚೀನಾಕ್ಕೆ ಪಾಕಿಸ್ತಾನ ಮೊರೆ ಹೋಗಿದೆ. ಈ ಸಂಬಂಧ ಖುದ್ದು ಮಾತುಕತೆ ನಡೆಸಲು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಅವರು ಶುಕ್ರವಾರ ಬೀಜಿಂಗ್‌ಗೆ ಆಗಮಿಸಿದ್ದಾರೆ. ಅವರು ಅಧಿಕೃತವಾಗಿ ಮಾತುಕತೆ ಆರಂಭಿಸುವ ಮುನ್ನವೇ ಚೀನಾ ತನ್ನ ಮಿತ್ರ ದೇಶದ ಆಸೆಗೆ ತಣ್ಣೀರೆರಚಿದೆ. ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ತಮ್ಮ ನಡುವೆ ಇರುವ ಬಿಕ್ಕಟ್ಟುಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಕಾಶ್ಮೀರಿ ನೀತಿ ಬದಲಿಲ್ಲ- ಅಮೆರಿಕ:  ಈ ನಡುವೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಮೆರಿಕದ ನೀತಿಯಲ್ಲಿ ಬದಲಾವಣೆ ಇಲ್ಲ. ಭಾರತ ಹಾಗೂ ಪಾಕಿಸ್ತಾನಗಳು ಸಹಿಷ್ಣುತೆ ವಹಿಸಿ, ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಆರ್ಟಿಕಲ್ 370 ರದ್ದತಿ: ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಇಮ್ರಾನ್ ಸ್ಥಿತಿ

370ನೇ ರದ್ದು ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕಿಸ್ತಾನ ಕೋರಿಕೆಗೆ ವಿಶ್ವಸಂಸ್ಥೆ ಕೂಡ ಸೊಪ್ಪು ಹಾಕಿಲ್ಲ. 1972ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿಕೊಂಡಿರುವ ಶಿಮ್ಲಾ ಒಪ್ಪಂದ ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವಿಲ್ಲ ಎಂದು ಹೇಳುತ್ತದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೋ ಗುಟೆರ್ರೆಸ್‌ ತಿಳಿಸುವ ಮೂಲಕ ಈ ವಿಚಾರದಲ್ಲಿ ಮೂಗುತೂರಿಸುವುದಿಲ್ಲ ಎಂದಿದ್ದಾರೆ.