ಕೋಲ್ಕತಾ[ಡಿ.03]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಯಾವುದೇ ಸಾಧ್ಯತೆಯನ್ನು ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯಾ ತಳ್ಳಿಹಾಕಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕಂತೂ ಸುಗ್ರೀವಾಜ್ಞೆ ಹೊರಡಿಸುವ ವಿಷಯ ನಮ್ಮ ಪಕ್ಷದ ಮುಂದಿಲ್ಲ. ಪ್ರಕರಣ ಕುರಿತು ನ್ಯಾಯಾಲಯ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ರಾಮಮಂದಿರ ವಿಷಯ, ಬಿಜೆಪಿಗೆ ಲಾಭ ಮಾಡಿದ್ದಕ್ಕಿಂತ ನಷ್ಟಉಂಟು ಮಾಡಿದ್ದೇ ಹೆಚ್ಚು. ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷಗಳು, ಅಲ್ಪಸಂಖ್ಯಾತರನ್ನು ಹೆದರಿಸುವ ಮೂಲಕ ಮತಗಳ ಧ್ರುವೀಕರಣ ಮಾಡುತ್ತಿದೆ. ಹೀಗಾಗಿ ಆದಷ್ಟು ಬೇಗ ಪ್ರಕರಣ ಕುರಿತು ನ್ಯಾಯಾಲಯ ತೀರ್ಪು ನೀಡಿದರೆ ಒಳಿತು ಎಂಬ ಅಭಿಪ್ರಾಯ ಪಕ್ಷದ್ದಾಗಿದೆ ಎಂದು ಹೇಳಿದ್ದಾರೆ.

ಒಂದು ವೇಳೆ ರಾಮಮಂದಿರ ನಿರ್ಮಾಣಕ್ಕೆ ಜನಾಗ್ರಹ ಹೆಚ್ಚಾಗಿದ್ದೇ ಆದಲ್ಲಿ, ಆಗ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಸರ್ಕಾರ ಇನ್ನೊಮ್ಮೆ ಚಿಂತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.