ಬಿಬಿಎಂಪಿ ಬೇಜವಾಬ್ದಾರಿಯಿದಾಂಗಿ ಶೈಕ್ಷಣಿಕ ವರ್ಷ ಮುಗಿಯುತ್ತ ಬರುತ್ತಿದ್ದರೂ ಪಾಲಿಕೆ ಆಡಳಿತದ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಭಾಗ್ಯ ದೊರೆತಿಲ್ಲ. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕರೆಯಬೇಕಿದ್ದ ಸಮವಸ್ತ್ರ, ಶೂ, ಸಾಕ್ಸ್ ಟೆಂಡರ್‌ಅನ್ನು ಬಿಬಿಎಂಪಿ ಅಧಿಕಾರಿಗಳು ಏಳು ತಿಂಗಳು ತಡವಾಗಿ ಕರೆಯುವ ಮೂಲಕ ಬೇಜವಾಬ್ದಾರಿ ತೋರಿದ್ದಾರೆ.
ಬೆಂಗಳೂರು (ಜ.3): ಬಿಬಿಎಂಪಿ ಬೇಜವಾಬ್ದಾರಿಯಿದಾಂಗಿ ಶೈಕ್ಷಣಿಕ ವರ್ಷ ಮುಗಿಯುತ್ತ ಬರುತ್ತಿದ್ದರೂ ಪಾಲಿಕೆ ಆಡಳಿತದ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಭಾಗ್ಯ ದೊರೆತಿಲ್ಲ. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕರೆಯಬೇಕಿದ್ದ ಸಮವಸ್ತ್ರ, ಶೂ, ಸಾಕ್ಸ್ ಟೆಂಡರ್ಅನ್ನು ಬಿಬಿಎಂಪಿ ಅಧಿಕಾರಿಗಳು ಏಳು ತಿಂಗಳು ತಡವಾಗಿ ಕರೆಯುವ ಮೂಲಕ ಬೇಜವಾಬ್ದಾರಿ ತೋರಿದ್ದಾರೆ.
ಇದರಿಂದ ಪರೀಕ್ಷಾ ಕಾಲ ಹತ್ತಿರ ಬರುತ್ತಿದ್ದರೂ ಪಾಲಿಕೆ ಶಾಲೆಗಳ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಭಾಗ್ಯ ಇಲ್ಲದಂತಾಗಿದೆ. ವರ್ಷಕ್ಕೆ ಸುಮಾರು 4500 ಕೋಟಿ ರು. ಗಳವರೆಗೂ ತೆರಿಗೆ ಸಂಗ್ರಹಿಸುವ ಬಿಬಿಎಂಪಿ ಶೈಕ್ಷಣಿಕ ವಿಚಾರಗಳಿಗೆ ಪ್ರತಿ ವರ್ಷ ಹಣ ಮೀಸಲಿಟ್ಟರೂ ಸಮಯಕ್ಕೆ ಸರಿಯಾಗಿ ಉಪಯೋಗಿಸುವುದಿಲ್ಲ. ಸಾಕಷ್ಟು ಹಣ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ಇನ್ನಷ್ಟು ಹಣ ಉಪಯೋಗವೇ ಆಗದೆ ಮುಂದಿನ ವರ್ಷಕ್ಕೆ ವರ್ಗಾವಣೆಯಾಗುತ್ತಿದೆ ಎಂಬ ಆರೋಪ ಕೌನ್ಸಿಲ್ ಸಭೆಯಲ್ಲಿ ಕೇಳಿಬರುತ್ತಲೇ ಇದೆ. ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿಯ ಆಡಳಿತಕ್ಕೊಳಪಟ್ಟಿರುವ 12 ಪ್ರಾಥಮಿಕ ಶಾಲೆಗಳು, 14 ಪ್ರೌಢ ಶಾಲೆಗಳು ಮತ್ತು 12 ಪದವಿ ಪೂರ್ವ ಕಾಲೇಜುಗಳು ನಗರದಲ್ಲಿವೆ.
ಇವುಗಳಲ್ಲಿ ಒಟ್ಟಾರೆ ಸುಮಾರು 15 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಗೆ ಕಳೆದ ವರ್ಷ 3.96 ಕೋಟಿ ರು. ಮೀಸಲಿಡಲಾಗಿದೆ. ಸಮಯಕ್ಕೆ ಸರಿಯಾಗಿ ಟೆಂಡರ್ ಕರೆದು ಕ್ರಮ ವಹಿಸಿದ್ದರೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಎಲ್ಲಾ ಮಕ್ಕಳಿಗೂ ತಲಾ ಒಂದೊಂದು ಜತೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ತಲುಪಬೇಕಿತ್ತು. ಆದರೆ, ಟೆಂಡರ್ ತಡವಾಗಿ ಕರೆದ ಪರಿಣಾಮ ತಡವಾಗಿದೆ.
ಬಿಬಿಎಂಪಿ ಮೂಲಗಳ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ ಟೆಂಡರ್ ಕರೆಯಲಾಗಿದ್ದು 60 ದಿನಗಳು ಕಳೆಯುತ್ತಿದೆ. ಆದರೂ, ಇನ್ನೂ ಶಾಲೆಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ತಲುಪಿಲ್ಲ. ಅಷ್ಟೇ ಅಲ್ಲ, ಶಾಲೆಗಳಲ್ಲಿ ಚಾಕ್ಪೀಸ್, ಡಸ್ಟರ್, ಪೆನ್ನು ಮತ್ತಿತರ ವಸ್ತುಗಳ ಖರೀದಿಗೂ ಶಾಲೆಗಳಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ ಶಿಕ್ಷಕರು. ಇದಕ್ಕಾಗಿ ಬಿಬಿಎಂ ಪಿ ಕಳೆದ ಬಜೆಟ್ನಲ್ಲಿ 1.5 ಕೋಟಿ ರು. ಮೀಸಲಿಟ್ಟಿದ್ದರೂ ಇದನ್ನು ಬಳಕೆ ಮಾಡಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿಗೆಂದು ಮೀಸಲಿಟ್ಟಿರುವ 15 ಕೋಟಿ ರು. ಹಣದಲ್ಲಿ ಕೆಲವೊಂದಷ್ಟನ್ನು ವಾರ್ಡ್ ಕಾಮಗಾರಿಗಳಿಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಧ್ಯಕ್ಷರು ಏನಂತಾರೆ?: ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ರಾಜಣ್ಣ ಅವರು, ನಾನು ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಮೇಲೆ ಈ ವಿಚಾರ ಗಮನಕ್ಕೆ ಬಂದಿದ್ದು, ಮೇಯರ್ ಅವರೊಂದಿಗೆ ಚರ್ಚಿಸಿ ಆದಷ್ಟು ಬೇಗ ಮಕ್ಕಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆಗೆ ಕ್ರಮ ವಹಿಸುತ್ತಿದ್ದೇನೆ.
ಟೆಂಡರ್ ನೀಡಿರುವುದು ತಡವಾಗಿರುವುದರಿಂದ ವಿತರಣೆ ತಡವಾಗಿದೆ. ಶನಿವಾರ ಈ ವಿಚಾರವಾಗಿ ನಮ್ಮ ಸ್ಥಾಯಿ ಸಮಿತಿ ಸಭೆ ಕರೆದಿದ್ದ ಮೇಯರ್ ಅವರು, ಇನ್ನೊಂದು ವಾರದೊಳಗೆ ಶಾಲೆಗಳಿಗೆ ಎಲ್ಲ ಶಾಲೆಗಳಿಗೂ ಸಮವಸ್ತ್ರ ತಲುಪುವಂತೆ ಕ್ರಮ ವಹಿಸಲು ಸೂಚಿಸಿದ್ದಾರೆ. ಶಾಲೆಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ಗಳುತಲುಪಿಸುವ ಕಾರ್ಯ ಆರಂಭವಾಗಿದೆ. ಇನ್ನೊಂದು ವಾರದಲ್ಲಿ ಪಾಲಿಕೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೂ ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
