ಮೂಡಿಗೆರೆ :  ರೋಗಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ರಸ್ತೆ ಸಂಪರ್ಕವಿಲ್ಲದ ಕಾರಣ ಭದ್ರಾನದಿಯಲ್ಲಿ ಹರಸಾಹಸ ಮಾಡಿರುವ ಮನಕಲಕುವ ಘಟನೆಯೊಂದು ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕೂವೆ ಗ್ರಾ.ಪಂ. ವ್ಯಾಪ್ತಿಯ ಹೊಳೆಕುಡಿಗೆ ಗ್ರಾಮದಲ್ಲಿ ರುದ್ರಯಯ್ಯ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಕಾಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವ ತುರ್ತು ಸಂದರ್ಭವಿತ್ತು. ಆಸ್ಪತ್ರೆಗೆ ಹೋಗಲು ರಸ್ತೆ ಸಂಪರ್ಕವೇ ಇರಲಿಲ್ಲ. ಇದರಿಂದಾಗಿ ತೆಪ್ಪದಲ್ಲಿ ಕುರ್ಚಿಯನ್ನಿಟ್ಟು, ಆ ಕುರ್ಚಿಯ ಮೇಲೆ ರೋಗಿಯನ್ನು ಕೂರಿಸಿ, ನದಿ ದಾಟಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಬ್ಬರ ಜೀವ ಉಳಿಸಲು ಹಲವರು ಪ್ರಾಣಭಯದ ನಡುವೆಯೂ ಕಾಳಜಿ, ಮಾನವೀಯತೆ ಮೆರೆದಿದ್ದಾರೆ.

ದ್ವೀಪದಂತಿರುವ ಗ್ರಾಮ: ಹೊಳೆಕುಡಿಗೆ ಗ್ರಾಮವು ಒಂದು ಬದಿ ಭದ್ರಾನದಿಯಿಂದ, ಮತ್ತೊಂದು ಬದಿ ಖಾಸಗಿಯವರ ತೋಟದಿಂದ ಸುತ್ತುವರಿದಿದೆ. ದ್ವೀಪದಂತಿರುವ ಗ್ರಾಮವಾಗಿದ್ದು, ಈ ಗ್ರಾಮಕ್ಕೆ ಹೋಗಿ ಬರುವುದೆಂದರೆ ಜೀವದ ಜೊತೆ ಆಟವಾಡಿದಂತೆಯೇ ಸರಿ. ನಿತ್ಯವೂ ಶಾಲೆಗೆ ತೆರಳುವ ಮಕ್ಕಳು ಕೂಡ ತೆಪ್ಪದ ಮುಖಾಂತರವೇ ದಾಟಬೇಕಾದ ಪರಿಸ್ಥಿತಿಯಿದೆ. ನದಿಯಲ್ಲಿ ತೆಪ್ಪ ಮಗುಚಿದರೆ ದೇವರೇ ಗತಿ ಎಂಬಂಥ ದುಸ್ಥಿತಿ ಇಲ್ಲಿನದು.

ಕಳೆದ ವರ್ಷ ಮುಂಗಾರಿನಲ್ಲಿ ಇದೇ ಗ್ರಾಮದ ಹಿರಿಯರೊಬ್ಬರು ತೀರಿಕೊಂಡ ಸಂದರ್ಭದಲ್ಲಿ ತುಂಬಿ ಹರಿಯುವ ನದಿಯಲ್ಲಿ ತೆಪ್ಪದ ಮೂಲಕವೇ ಹೆಣ ಸಾಗಿಸಲಾಗಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ, ಸರ್ಕಾರದ ಗಮನವೂ ಸೆಳೆದಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ವಿವಿಧ ಪಕ್ಷಗಳ ಮುಖಂಡರು ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ರಸ್ತೆ ಆಗದಿದ್ದರೆ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡುವುದಾಗಿಯೂ ಹೇಳಿದ್ದರು. ಆದರೆ ಈವರೆಗೆ ಯಾವುದೇ ವ್ಯವಸ್ಥೆ ಈ ಗ್ರಾಮಕ್ಕೆ ಮಾಡಿಕೊಡಲಾಗಿಲ್ಲ.

ಗ್ರಾಮಕ್ಕೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಕೋರಲಾಗಿದೆ. ಆದರೆ, ಅರಣ್ಯ ಇಲಾಖೆ ಅನುಮತಿ ದೊರೆತರೂ 3 ಕಿ.ಮೀ. ರಸ್ತೆ ನಿರ್ಮಿಸಬಹುದು. ಆದರೆ ಇನ್ನುಳಿದ 1 ಕಿ.ಮೀ. ರಸ್ತೆ ಖಾಸಗಿಯವರ ತೋಟದೊಳಗೇ ಹೋಗಬೇಕಾಗಿದೆ. ಆದರೆ ಖಾಸಗಿಯವರು ಮತ್ತು ಅರಣ್ಯ ಇಲಾಖೆಯ ವ್ಯಾಜ್ಯ ಉಚ್ಚ ನ್ಯಾಯಾಲಯದಲ್ಲಿದೆ. ಹಾಗಾಗಿ ಹೊಳೆಕುಡಿಗೆ ಗ್ರಾಮಕ್ಕೆ ತೂಗುಸೇತುವೆಯೇ ಸೂಕ್ತ ಎನ್ನುವುದು ಇಲ್ಲಿನ ಮತ್ತು ಸುತ್ತಮುತ್ತಲ ಗ್ರಾಮದವರ ಅಭಿಪ್ರಾಯವಾಗಿದೆ.

ರಾಜಕೀಯ ಪಕ್ಷದ ಮುಖಂಡರು ತಮಗೆ ಓಡಾಡಲು ದಾರಿ ಬಿಡುತ್ತಿಲ್ಲ. ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಹೊಳೆಕುಡಿಗೆ ಗ್ರಾಮದವರು ಹಲವು ಹೋರಾಟ ನಡೆಸಿದ್ದಾರೆ. ಈ ಪ್ರಕರಣ ಎಸ್ಸಿ-ಎಸ್ಟಿದೌರ್ಜನ್ಯ ನಿಯಂತ್ರಣದಡಿ ದಾಖಲಿಸಿಕೊಳ್ಳಲಾಗಿದೆ. ಆದರೆ, ಇದಕ್ಕೆ ತಕ್ಷಣಕ್ಕೆ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ಜನರ ಬವಣೆಯೂ ಸುಖಾಂತ್ಯ ಕಾಣುತ್ತಿಲ್ಲ. ತುರ್ತು ಸಂದರ್ಭದಳಲ್ಲಿ ಹೊಳೆದಾಟುವ ಪರಿಸ್ಥಿತಿಗಳು ಎದುರಾದರೆ ಜೀವನ ಹೇಗೆ ಎಂಬುದೇ ಗ್ರಾಮಸ್ಥರ ಆತಂಕವಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.