ನವದೆಹಲಿ (ಸೆ.19): ಕಾವೇರಿಯ ಕೊನೆ ಆಸೆಯೂ ಕಮರಿದೆ. ಕಾವೇರಿ ವಿಚಾರದಲ್ಲಿ ಮತ್ತೆ ರಾಜ್ಯಕ್ಕೆ ಹಿನ್ನೆಡೆಯಾಗಿದೆ. ಸುಪ್ರೀಂ ಕೋರ್ಟ್ ನಂತರ ಇದೀಗ ಕಾವೇರಿ ಮೇಲುಸ್ತುವಾರಿ ಸಮಿತಿ ಸಹ ತಮಿಳುನಾಡಿಗೆ 10 ದಿನಗಳ ಕಾಲ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.
ಇಂದು ದೆಹಲಿಯ ಶ್ರಮಶಕ್ತಿ ಭವನದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು. ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಅವರು ವಾದಿಸಿದ್ದರು.
ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ತಮಿಳುನಾಡು, ಕರ್ನಾಟಕ ನಿಗದಿಯಂತೆ ಬಿಡುಗಡೆ ಮಾಡಬೇಕಿರುವ ಕಾವೇರಿ ನೀರನ್ನು ಬಿಡಬೇಕೆಂದು ವಾದ ಮಂಡಿಸಿತು.
ಆದರೆ ಕರ್ನಾಟಕ ವಾದಕ್ಕೆ ಮನ್ನಣೆ ನೀಡದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ , 10 ದಿನಗಳ ಕಾಲ ನಿತ್ಯ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ್ಕೆ ಆದೇಶ ನೀಡಿದೆ.
ನಾಳೆ ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ವಿಚಾರಣೆ ನಡೆಯಲಿದೆ.
‘ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದು’
ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್, ಸಭೆಯಲ್ಲಿ ನೀರಿನ ಒಳ ಹರಿವು, ಹೊರ ಹರಿವು, ಜಲಾಶಯದ ನೀರಿನ ಮಟ್ಟ ಸೇರಿದಂತೆ ಎಲ್ಲದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಪ್ರತಿ ವರ್ಷ ಇದೇ ರೀತಿ ಕಾವೇರಿ ನೀರಿ ಸಮಸ್ಯೆಯಾಗುತ್ತದೆ. ಹೀಗಾಗಿ ಎಲ್ಲಾ ಅಂಶಗಳನ್ನು ಗಮನಿಸಿ ಅಂತಿಮವಾಗಿ ಸೆಪ್ಟೆಂಬರ್ 21ರಿಂದ 30ರವರೆಗೆ 10 ದಿನಗಳ ಕಾಲ ಮೂರು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ ಎಂದರು.
ಈ ಆದೇಶದಿಂದ ರಾಜ್ಯಗಳಿಗೆ ತೃಪ್ತಿ ಸಿಕ್ಕಿಲ್ಲವೆಂದಾದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಬಹುದು ಎಂದು ಎರಡೂ ರಾಜ್ಯಗಳಿಗೆ ಶಶಿಶೇಖರ್ ಸಲಹೆ ನೀಡಿದ್ದಾರೆ.
