Asianet Suvarna News Asianet Suvarna News

ಆರ್'ಬಿಐನಿಂದ ರೇಟ್ ಕಟ್ ಇಲ್ಲ; ಮ್ಯುಚುವಲ್ ಫಂಡ್, ಲೋನ್'ಗೆ ಇನ್ನೂ ಇದೆ ಸಕಾಲ

ನೀವು ಫ್ಲೋಟಿಂಗ್ ರೇಟ್(ಬದಲಾಗುವ ಬಡ್ಡಿ)ನಲ್ಲಿ ಸಾಲ ಪಡೆದವರಾಗಿದ್ದರೆ, ನಿಮ್ಮ ಸದ್ಯದ ಸಾಲದ ಮೇಲಿನ ಬಡ್ಡಿಯಲ್ಲಿ ಯಾವುದೇ ಇಳಿಕೆಯಂತೂ ಆಗುವುದಿಲ್ಲ. ಆರ್'ಬಿಐ ದರ ಬದಲಾವಣೆ ಮಾಡಿದಾಗಷ್ಟೇ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಾಗಬಹುದು. ನೀವು ಹೊಸ ಸಾಲ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಇದು ಸಕಾಲವಾಗಿದೆ.

no rate cut but still a great time to take loans buy mutual funds bankbazaar

ರಿಸರ್ವ್ ಬ್ಯಾಂಕ್ (ಆರ್'ಬಿಐ) ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ(ಎಂಪಿಸಿ)ಯೂ ಈ ಬಾರಿ ಯಾವುದೇ ಪ್ರಮುಖ ದರ ಬದಲಾವಣೆ ಮಾಡಿಲ್ಲ. ಆರ್'ಬಿಐ ತನ್ನ ರಿಪೋ ಮತ್ತು ರಿವರ್ಸ್ ರಿಪೋ ದರಗಳು 6% ಮತ್ತು 5.75% ಯಥಾಸ್ಥಿತಿಯಲ್ಲಿ ಇರಿಸಿದೆ. ಈ ದರಗಳು ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳುವ ಮುಂಚೆ ರಿಪೋ ದರ ಎಂದರೇನೆಂದು ಅರಿಯುವುದು ಮುಖ್ಯ.

ಬ್ಯಾಂಕುಗಳಿಗೆ ಹಣ ನೀಡುವಾಗ ಆರ್'ಬಿಐ ವಿಧಿಸುವ ದರವೇ ರಿಪೋ ದರ. ಅಂದರೆ, ಆರ್'ಬಿಐನಿಂದ ಬ್ಯಾಂಕುಗಳು ಹಣ ಪಡೆಯಲು ರಿಪೋ ದರ ತೆರಬೇಕು. ಇನ್ನು, ರಿವರ್ಸ್ ರಿಪೋ ಎಂದರೆ ಬ್ಯಾಂಕುಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಆರ್'ಬಿಐಯನಲ್ಲಿ ಇರಿಸಿದಾಗ ಅದಕ್ಕೆ ಸಿಗುವ ಬಡ್ಡಿ ದರವಾಗಿರುತ್ತದೆ.

ಆರ್'ಬಿಐ ಆಗಸ್ಟ್ 9ರಂದು ತನ್ನ ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಇಳಿಕೆ ಮಾಡಿತ್ತು. ಆದರೆ, ಈ ಬಾರಿ ದರ ಬದಲಾವಣೆಯಾಗುವುದಿಲ್ಲವೆಂಬ ನಿರೀಕ್ಷೆ ಬ್ಯಾಂಕಿಂಗ್ ವಲಯದಲ್ಲಿತ್ತು. ಯಾಕೆಂದರೆ, ಮೂಲ ಹಣದುಬ್ಬರ ಪ್ರಮಾಣವು ಕ್ಷಿಪ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಆರ್'ಬಿಐ ತನ್ನ ರಿಪೋ ದರವನ್ನು ಬದಲಿಸುವ ಕೆಲಸಕ್ಕೆ ಕೈಹಾಕುವುದಿಲ್ಲವೆಂದು ಅಂದಾಜಿಸಲಾಗಿತ್ತು. ಅದು ನಿಜವೇ ಆಯಿತು. ಭವಿಷ್ಯದಲ್ಲಿ ರಿಪೋ ದರಗಳ ಬದಲಾವಣೆಯ ಅಂದಾಜು ಮಾಡಲು ಹಣದುಬ್ಬರದ ಸ್ಥಿತಿಯ ಮೇಲೆ ಒಂದು ಕಣ್ಣಿಟ್ಟಿರುವುದು ಮುಖ್ಯ ಎಂಬುದನ್ನು ಹೂಡಿಕೆದಾರರು ತಿಳಿದುಕೊಂಡಿರಬೇಕು.

ರಿಪೋ ದರದ ಯಥಾಸ್ಥಿತಿ ಇರುವುದರಿಂದ ಬ್ಯಾಂಕುಗಳ ಠೇವಣಿ ಮತ್ತು ಸಾಲದ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ವ್ಯತ್ಯಾಸವಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಸಾಲ ಪಡೆಯುವವರಿಗೆ:
ನೀವು ಫ್ಲೋಟಿಂಗ್ ರೇಟ್(ಬದಲಾಗುವ ಬಡ್ಡಿ)ನಲ್ಲಿ ಸಾಲ ಪಡೆದವರಾಗಿದ್ದರೆ, ನಿಮ್ಮ ಸದ್ಯದ ಸಾಲದ ಮೇಲಿನ ಬಡ್ಡಿಯಲ್ಲಿ ಯಾವುದೇ ಇಳಿಕೆಯಂತೂ ಆಗುವುದಿಲ್ಲ. ಆರ್'ಬಿಐ ದರ ಬದಲಾವಣೆ ಮಾಡಿದಾಗಷ್ಟೇ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಾಗಬಹುದು. ನೀವು ಹೊಸ ಸಾಲ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಇದು ಸಕಾಲವಾಗಿದೆ.

ಡಿಸೆಂಬರ್ ತಿಂಗಳಲ್ಲಿ ಆರ್'ಬಿಐ ತನ್ನ ರಿಪೋ ದರದಲ್ಲಿ ಸ್ವಲ್ಪ ಇಳಿಕೆ ಮಾಡುವ ನಿರೀಕ್ಷೆ ಇದೆ. ಒಂದು ವೇಳೆ ಈ ಬದಲಾವಣೆ ಆಗದಿದ್ದರೂ ಕೂಡ ಸದ್ಯದ ಬಡ್ಡಿ ದರಗಳು ಕಡಿಮೆಯೇ ಇವೆ. ವಾರ್ಷಿಕ 8.30% ಬಡ್ಡಿಯಲ್ಲಿ ಗೃಹಸಾಲಗಳು ಲಭ್ಯವಿವೆ. ಕಾರ್ ಲೋನ್ ದರಗಳು 8.9% ಆಸುಪಾಸಿನಲ್ಲಿವೆ. ಪರ್ಸನಲ್ ಲೋನ್ ಮೇಲಿನ ಬಡ್ಡಿ 10.60%ನಿಂದ ಆರಂಭವಾಗುತ್ತದೆ. ಹಬ್ಬದ ಸೀಸನ್ ಇರುವುದರಿಂದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಪ್ರೋಸಸಿಂಗ್ ಶುಲ್ಕದ ವಿನಾಯಿತಿ ನೀಡಬಹುದು. ಅಥವಾ ಮಹಿಳೆಯರಿಗೆ ವಿಶೇಷ ಆಫರ್ಸ್ ಕೊಡಬಹುದು. ಇದರ ಜೊತೆಗೆ, ನೀವು ಆನ್'ಲೈನ್'ನಲ್ಲಿ ಸಾಲ ಪಡೆದರೆ 5 ಸಾವಿರ ರೂ.ವರೆಗೆ ಗಿಫ್ಟ್ ವೋಚರ್ ಪಡೆಯುವ ಅವಕಾಶವೂ ಇರುತ್ತದೆ. ಕಡಿಮೆ ಬಡ್ಡಿ ದರದಿಂದ ನಿಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು. ಹೋಮ್ ಲೋನ್ ಅಥವಾ ಕಾರ್ ಲೋನ್'ಗೆ ಕಡಿಮೆ ಬಡ್ಡಿ ಇದ್ದರೆ ನೀವು ಇನ್ನೂ ದೊಡ್ಡ ಮನೆ ಅಥವಾ ದೊಡ್ಡ ಕಾರು ಖರೀದಿಸಿ ಮನದಾಸೆ ಪೂರೈಸಿಕೊಳ್ಳಲು ಯತ್ನಿಸಬಹುದು. ಕಡಿಮೆ ಬಡ್ಡಿಗೆ ಪರ್ಸನ್ ಲೋನ್ ಸಿಕ್ಕರೆ ನೀವು ಪ್ರವಾಸ ಮಾಡಬಹುದು, ಅಥವಾ ಮೊಬೈಲ್, ಕಂಪ್ಯೂಟರ್ ಖರೀದಿಸಬಹುದು, ಅಥವಾ ದ್ವಿಚಕ್ರ ವಾಹನ ಕೊಳ್ಳಬಹುದು.

ಬಡ್ಡಿ ದರ ಕಡಿಮೆ ಇದ್ದಾಗ ನಿಮ್ಮ ಹಾಲಿ ಸಾಲಗಳನ್ನು ಮುಂಗಡವಾಗಿ ತೀರಿಸಲು ಒಳ್ಳೆಯ ಅವಕಾಶವಿರುತ್ತದೆ. ನೀವು ಸಾಲದ ಆರಂಭಿಕ ಹಂತದಲ್ಲಿದ್ದರೆ ಮುಂಗಡವಾಗಿ ಹಣ ಕಟ್ಟಲು ಇದು ಸಕಾಲವಾಗಿರುತ್ತದೆ. ಗೃಹಸಾಲದಂಥ ದೀರ್ಘಾವಧಿ ಸಾಲದಲ್ಲಿ ನೀವು ಒಂದು ತಿಂಗಳ ಇಎಂಐ ಅನ್ನು ಮುಂಗಡವಾಗಿ ಪಾವತಿಸಿದರೂ ಸಾಕು ಲಕ್ಷಾಂತರ ರೂಪಾಯಿ ಉಳಿಸಬಹುದು; ನಿಮ್ಮ ಸಾಲದ ಕಂತುಗಳನ್ನು ಸಾಕಷ್ಟು ಕಡಿಮೆ ಮಾಡಬಹುದು.

ಹೂಡಿಕೆದಾರರಿಗೆ:
ರಿಪೋ ದರದಲ್ಲಿ ಬದಲಾವಣೆ ಮಾಡಿಲ್ಲದಿರುವುದು ಹೂಡಿಕೆದಾರರಿಗೂ ಸ್ವಾಗತಾರ್ಹ ನಿರ್ಧಾರ. ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್)ಯ ಮೇಲಿನ ಬಡ್ಡಿ ದರ ಇನ್ನಷ್ಟು ಇಳಿಯುವುದಿಲ್ಲ ಎಂಬ ಖಾತ್ರಿ ಇರುತ್ತದೆ. ಇತ್ತೀಚಿನ ವರ್ಷಗಳಿಂದ ಫಿಕ್ಸೆಡ್ ಡೆಪಾಸಿಟ್ ಅಥವಾ ಉಳಿತಾಯ ಯೋಜನೆಗಳಿಂದ ಸಿಗುತ್ತಿರುವ ಆದಾಯ ಕಡಿಮೆಯಾಗುತ್ತಿರುವುದಂತೂ ನಿಜ. ಬಹುತೇಕ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ 6-7% ಬಡ್ಡಿ ನೀಡುತ್ತವೆ. ಪಿಪಿಎಫ್ ಮೇಲಿನ ಬಡ್ಡಿ 7.8% ಇದೆ. ಇದು ದಶಕಗಳಲ್ಲೇ ಅತ್ಯಂತ ಕಡಿಮೆ ದರವಾಗಿದೆ. ಈ ಹಿನ್ನೆಲೆಯಲ್ಲಿ ನೀವು ಹೆಚ್ಚು ಆದಾಯ ತರುವ ಯೋಜನೆಯ ಶೋಧದಲ್ಲಿದ್ದರೆ ಬೇರೆ ಅನೇಕ ಆಯ್ಕೆಗಳಿವೆ.

ನಿಮಗೆ ಸ್ವಲ್ಪ ಆದಾಯ ಬಂದರೂ ಪರವಾಗಿಲ್ಲ ಬಹಳ ಸುರಕ್ಷಿತವಾಗಿರುವ ಹಾಗೂ ಬೇಕೆಂದಾಗೆಲ್ಲಾ ಕ್ಯಾಷ್ ಮಾಡಬಲ್ಲಂತಹ ಯೋಜನೆಯ ಅಗತ್ಯವೆನಿಸಿದರೆ, ಅಂತಹ ಮ್ಯುಚುವಲ್ ಫಂಡ್'ಗಳೂ ಇವೆ. ಬ್ಯಾಂಕ್ ಠೇವಣಿ ಇಟ್ಟರೆ, ಅದರ ಸ್ಲ್ಯಾಬ್'ಗೆ ಅನುಸಾರ ನೀವು ತೆರಿಗೆ ಪಾವತಿಸಬೇಕು. ಆದರೆ, ಮ್ಯುಚುವಲ್ ಫಂಡ್ ವಿಚಾರದಲ್ಲಿ ನೀವು ರಿಡೆಂಪ್ಷನ್(ವಾಪಸ್ ಪಡೆಯುವುದು) ಮಾಡುವಾಗ ನಿಮ್ಮ ಆದಾಯದ ಮೇಲಷ್ಟೇ ತೆರಿಗೆ ವಿಧಿಸಲಾಗುತ್ತದೆ. ದೊಡ್ಡ ಬ್ಯಾಂಕುಗಳಿಗಿಂತ 0.5-1.0% ಅಧಿಕ ಬಡ್ಡಿ ದರ ಕೊಡುವ ಸಣ್ಣ ಬ್ಯಾಂಕುಗಳಲ್ಲಿ ನೀವು ಠೇವಣಿ ಇಡಬಹುದು. ಹಾಗೆಂದ ಮಾತ್ರಕ್ಕೆ ನೀವು ನಿಶ್ಚಿತ ಠೇವಣಿಯನ್ನೇ ಇಡಬಾರದು ಎಂದೇನಲ್ಲ. ಫಿಕ್ಸೆಡ್ ಡೆಪಾಸಿಟ್'ನಲ್ಲಿ ದೊಡ್ಡ ಹಣ ಹಾಕುವುದಕ್ಕಿಂತ ಬೇರೆ ಬೇರೆ ರೀತಿಯ ಯೋಜನೆಗಳಲ್ಲಿ ಸಣ್ಣ ಸಣ್ಣ ಮೊತ್ತವನ್ನು ಹೂಡುವುದು ಉತ್ತಮ. ಅಲ್ಪಾವಧಿಯ ಹಾಗೂ ಲಾಕ್-ಇನ್ ಇಲ್ಲದ ನಿಶ್ಚಿತ ಠೇವಣಿಗಳಲ್ಲಿ ಬಡ್ಡಿ ದರ ಹೆಚ್ಚಾದ ಕೂಡಲೇ ಅನ್ವಯವಾಗುತ್ತದೆ. ಆದರೆ, ಶೀಘ್ರದಲ್ಲೇ ಬಡ್ಡಿ ದರ ಕಡಿಮೆಯಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಬಡ್ಡಿ ದರ ಕಡಿಮೆ ಆಗುವುದನ್ನು ತಪ್ಪಿಸಲು ನಿಶ್ಚಿತ ಠೇವಣಿಯಲ್ಲಿ ನಿಮ್ಮ ಹಣವನ್ನು ಲಾಕ್-ಇನ್ ಮಾಡುವುದು ಉತ್ತಮ ನಿರ್ಧಾರ.

- ಅಧಿಲ್ ಶೆಟ್ಟಿ,
ಸಿಇಒ, ಬ್ಯಾಂಕ್ ಬಜಾರ್ ಡಾಟ್ ಕಾಮ್

Follow Us:
Download App:
  • android
  • ios