ಬಳ್ಳಾರಿ (ಮೇ. 09): ಅತ್ತ ನಾರಾಯಣಪುರ ಜಲಾಶಯಕ್ಕೆ ಸೂಕ್ತ ಭದ್ರತೆ ಇಲ್ಲದಿರುವ ವಿಷಯ ಬಹಿರಂಗಗೊಂಡ ಬೆನ್ನಲ್ಲೇ ಬಳ್ಳಾರಿ-ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೂ ಸೂಕ್ತ ಭದ್ರತೆ ಕೊರತೆ ಇರುವುದು ಬೆಳಕಿಗೆ ಬಂದಿದೆ.

ಈ ಜಲಾಶಯವು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಬಳ್ಳಾರಿ ಜಿಲ್ಲೆಯ ಕಡೆ ಜಲಾಶಯದ ಭದ್ರತೆಯ ಹೊಣೆಯನ್ನು ತುಂಗಭದ್ರಾ ಮಂಡಳಿ ನಿರ್ವಹಿಸುತ್ತಿದ್ದು, ಇಲ್ಲಿ ಸೂಕ್ತವಾದ ಭದ್ರತೆಯನ್ನು ಒದಗಿಸಲಾಗಿದೆ. ಆದರೆ ಕೊಪ್ಪಳ ಕಡೆ ಇರುವ ಜಲಾಶಯದ ಭಾಗ ಮುನಿರಾಬಾದ್‌ನಲ್ಲಿ ಭದ್ರತೆಯಲ್ಲಿ ಭಾರಿ ಲೋಪ ಕಂಡು ಬಂದಿದೆ.

2 ವರ್ಷದಿಂದಲೂ ಭದ್ರತೆ ಇಲ್ಲ:

ಮುನಿರಾಬಾದ್‌ ಪ್ರದೇಶದ ಭದ್ರತೆ ಜವಾಬ್ದಾರಿ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು. ಈ ಭಾಗದಲ್ಲಿ ಜಲಾಶಯಕ್ಕೆ ಹೋಗಲು ಎರಡು ದಾರಿಗಳಿವೆ. ಒಂದು ವಿಶ್ವೇಶ್ವರಯ್ಯ ವೃತ್ತದಲ್ಲಿದ್ದು, ಇನ್ನೊಂದು ಪೊಲೀಸ್‌ ಠಾಣೆಯ ಪಕ್ಕದಲ್ಲಿದೆ. ಈ ಎರಡೂ ದಾರಿಗಳಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ರಾತ್ರಿ-ಹಗಲು ಈ ಗೇಟುಗಳು ತೆರೆದಿರುತ್ತವೆ. ಟೆಂಡರ್‌ ಅವಧಿ ಮುಗಿದ ಆನಂತರ ಭದ್ರತಾ ಸಿಬ್ಬಂದಿ ನೇಮಕಕ್ಕಾಗಿ ನೀರಾವರಿ ಇಲಾಖಾ ಅಧಿಕಾರಿಗಳು ಪುನಃ ಟೆಂಡರ್‌ ಕರೆದಿಲ್ಲ. ಹೀಗಾಗಿ ಎರಡು ವರ್ಷಗಳಿಂದ ಜಲಾಶಯದ ಭದ್ರತೆಗೆ ಖಾಸಗಿ ಸಿಬ್ಬಂದಿ ಇಲ್ಲದಂತಾಗಿದೆ.

ಗಾರ್ಡ್‌ಗಳೇ ಇಲ್ಲ:

ಜಲಾಶಯಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ನಿಗಮವು ಇಲ್ಲಿನ ಕಾಡಾ ಕಚೇರಿ, ಮಾಡಲ್‌ ರೂಂ ಸಮೀಪ ಹಾಗೂ ಮುಖ್ಯ ಅಭಿಯಂತರರ ಮನೆ ಹಿಂದೆ ಹೀಗೆ ಮೂರು ಕಡೆ ಗಾರ್ಡ್‌ ರೂಂ ನಿರ್ಮಿಸಿದೆ. ಆದರೆ, ಅಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೇ ಅವುಗಳಿಗೆ ಬೀಗ ಹಾಕಲಾಗಿದೆ. ಮುನಿರಾಬಾದ್‌ ಡ್ಯಾಂ ನಿಷೇಧಿತ ಪ್ರದೇಶ ಎಂದು ಬೋರ್ಡ್‌ ಹಾಕಿದ್ದರೂ ಓಡಾಟಕ್ಕೆ ಯಾವುದೇ ಅಡೆತಡೆಗಳಿಲ್ಲ.

ಬಳ್ಳಾರಿ ಭಾಗದಲ್ಲಿ ಡ್ಯಾಂ ಭದ್ರತೆಗಾಗಿ ಪೊಲೀಸ್‌ ಠಾಣೆಯನ್ನು ಸ್ಥಾಪಿಸಿದ್ದು, ಕೊಪ್ಪಳ ಭಾಗದಲ್ಲೂ ಇದೇ ರೀತಿ ಪೊಲೀಸ್‌ ಠಾಣೆ ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಡ್ಯಾಂಗೆ ಭದ್ರತಾ ವ್ಯವಸ್ಥೆ ಕಲ್ಪಿಸಲು ನಿರಾವರಿ ಇಲಾಖೆ ವತಿಯಿಂದ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿದ್ದು, ಪೊಲೀಸ್‌ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಬಂದು ಸ್ಥಳದ ಪರಿವೀಕ್ಷಣೆ ಮಾಡಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದ್ದಾರೆ.