ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯನ್ನು 1961ರಲ್ಲಿ ಅಂದಿನ ಪ್ರಧಾನಿ ನೆಹರೂ ಉದ್ಘಾಟಿಸಿದ್ದರು. ಆದರೆ, ಆಗಿನಿಂದಲು ಈ ಯೋಜನೆ ಒಂದಲ್ಲ ಒಂದು ವಿಧದಲ್ಲಿ ಅಡೆತಡೆಗಳನ್ನು ಎದುರಿಸುತ್ತಾ ಬಂದಿತ್ತು. ಹೀಗಾಗಿ, ಈ ಅಣೆಕಟ್ಟು ನಿರ್ಮಾಣಕ್ಕೆ 56 ವರ್ಷಗಳು ಹಿಡಿದಿದೆ.
ದಾಭೋಯ್(ಸೆ. 17): ಭಾರತದ ಅತ್ಯಂತ ವಿವಾದಾತ್ಮಕ ಯೋಜನೆಗಳಲ್ಲೊಂದೆನಿಸಿದ ಸರ್ದಾರ್ ಸರೋವರ್ ಅಣೆಕಟ್ಟು ಕೊನೆಗೂ ಲೋಕಾರ್ಪಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದೇ ಈ ಅಣೆಕಟ್ಟನ್ನು ಬಿಡುಗಡೆ ಮಾಡಿದರು. ಪ್ರಪಂಚದ ಎರಡನೇ ಅತಿದೊಡ್ಡ ಅಣೆಕಟ್ಟು ಎನಿಸಿರುವ ಇದು ಎಂಜಿನಿಯರಿಂಗ್ ಪವಾಡವೆಂದೇ ಬಣ್ಣಿಸಲಾಗುತ್ತಿದೆ. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಾಲಿಗೆ ಈ ಅಣೆಕಟ್ಟು ಜೀವವಾಹಿನಿಯಾಗಲಿದೆ.
ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯನ್ನು 1961ರಲ್ಲಿ ಅಂದಿನ ಪ್ರಧಾನಿ ನೆಹರೂ ಉದ್ಘಾಟಿಸಿದ್ದರು. ಆದರೆ, ಆಗಿನಿಂದಲು ಈ ಯೋಜನೆ ಒಂದಲ್ಲ ಒಂದು ವಿಧದಲ್ಲಿ ಅಡೆತಡೆಗಳನ್ನು ಎದುರಿಸುತ್ತಾ ಬಂದಿತ್ತು. ಹೀಗಾಗಿ, ಈ ಅಣೆಕಟ್ಟು ನಿರ್ಮಾಣಕ್ಕೆ 56 ವರ್ಷಗಳು ಹಿಡಿದಿದೆ.
ಅಣೆಕಟ್ಟಿಗೆ ದೇವಸ್ಥಾನಗಳ ಹಣ:
ಅಣೆಕಟ್ಟು ಉದ್ಘಾಟನೆ ವೇಳೆ ಮಾತನಾಡಿದ ನರೇಂದ್ರ ಮೋದಿ, ಈ ಯೋಜನೆಯನ್ನು ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಬಿಆರ್ ಅಂಬೇಡ್ಕರ್ ಅವರಿಗೆ ಸಮರ್ಪಿಸಿದರು. ಪಟೇಲ್ ಮತ್ತು ಅಂಬೇಡ್ಕರ್ ಇನ್ನೊಂದಿಷ್ಟು ವರ್ಷ ಬದುಕಿದಿದ್ದರೆ ದಶಕಗಳ ಹಿಂದೆಯೇ ಈ ಯೋಜನೆಗೆ ಪೂರ್ಣಗೊಳ್ಳುತ್ತಿತ್ತು ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟರು. "ಪ್ರಪಂಚದ ಯಾವುದೇ ಯೋಜನೆಗೂ ಇರದಷ್ಟು ಅಡೆತಡೆಗಳು ಈ ಯೋಜನೆಗೆ ಬಂದಿತ್ತು. ವಿಶ್ವ ಬ್ಯಾಂಕ್ ಈ ಯೋಜನೆಗೆ ಸಾಲ ನೀಡಲು ನಿರಾಕರಿಸಿತ್ತು. ಗುಜರಾತ್'ನ ದೇವಸ್ಥಾನಗಳ ನಿಧಿಯಿಂದ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು" ಎಂದು ನರೇಂದ್ರ ಮೋದಿ ಬಣ್ಣಿಸಿದರು.
"ಯೋಜನೆ ವಿರುದ್ಧ ಸುಳ್ಳುಗಳ ಅಭಿಯಾನವನ್ನೇ ನಡೆಲಾಗಿತ್ತು. ಯೋಜನೆಗೆ ಸಾಲ ಕೊಡುವುದಾಗಿ ಮುಂಚೆ ಒಪ್ಪಿಕೊಂಡಿದ್ದ ವಿಶ್ವಬ್ಯಾಂಕ್, ಬಳಿಕ ಪರಿಸರಹಾನಿಯ ಕಾರಣಗಳನ್ನೊಡ್ಡಿ ಸಹಾಯ ಮಾಡಲು ನಿರಾಕರಿಸಿತು. ವಿಶ್ವ ಬ್ಯಾಂಕ್'ನ ನೆರವಿಲ್ಲದೆಯೇ ನಮ್ಮ ಸ್ವಂತ ಶಕ್ತಿಯ ಬಲದಿಂದಲೇ ಈ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ," ಎಂದು ಮೋದಿ ಹೇಳಿಕೊಂಡರು.
"ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಗೆ ಅಡ್ಡಲಾಗಿ ಬಂದ ಜನರ ಪಟ್ಟಿ ನನ್ನ ಬಳಿ ಇದೆ. ಆದರೆ, ಈ ವಿಚಾರವನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ," ಎಂದೂ ಪ್ರಧಾನಿ ಹೇಳಿದರು.
ಸರ್ದಾರ್ ಸರೋವರ್ ಯೋಜನೆಯಿಂದ ಪರಿಸರವಾದಿಗಳು ಹಾಗೂ ಜನಪರ ಹೋರಾಟಗಾರರು ಮೊದಲಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಮೇಧಾ ಪಾಟ್ಕರ್ ನೇತೃತ್ವದಲ್ಲಿ ನರ್ಮದಾ ಬಚಾವೋ ಆಂದೋಲನ ರೂಪುಗೊಂಡಿದ್ದೇ ಈ ಯೋಜನೆಯನ್ನು ತಡೆಯಲು. ಯೋಜನೆಯಿಂದ ಸಾಕಷ್ಟು ಹಳ್ಳಿಗಳು ಮುಳುಗಡೆಯಾಗಿ ಲಕ್ಷಾಂತರ ಜನರು ನಿರ್ವಸಿತಗರಾಗುತ್ತಾರೆಂದು ಆರೋಪಿಸಿ ದೊಡ್ಡ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆದಿದ್ದವು. ಒಂದು ಅಂದಾಜಿನ ಪ್ರಕಾರ ಈ ಯೋಜನೆಯಿಂದ 3.2 ಲಕ್ಷ ಜನರು ತಮ್ಮ ನೆಲ ಕಳೆದುಕೊಳ್ಳಬೇಕಾಯಿತು.
