ನವದೆಹಲಿ: ನಗರಗಳನ್ನು ರೂಪಾಂತರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ‘ಸ್ಮಾರ್ಟ್ ಸಿಟಿ’ ಯೋಜನೆ ಆರಂಭಿಸಿ ಎರಡೂವರೆ ವರ್ಷಗಳು ಉರುಳಿವೆ.

ಯೋಜನೆಗೆ ಈಗಾಗಲೇ 90 ನಗರಗಳು ಆಯ್ಕೆಯಾಗಿವೆ. ಅವುಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ 9824 ಕೋಟಿ ರು.ಗಳನ್ನೂ ಬಿಡುಗಡೆ ಮಾಡಿ ಆಗಿದೆ. ಆದರೆ ನಗರಗಳು ಮಾತ್ರ ರೂಪಾಂತರ ಕಾಣುತ್ತಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಹಣ ಖರ್ಚೇ ಆಗಿಲ್ಲ!

ಅಚ್ಚರಿಯಾದರೂ ಇದು ನಿಜ. 2022ರೊಳಗೆ 100 ನಗರಗಳನ್ನು ಸ್ಮಾರ್ಟ್ ಸಿಟಿಯಾಗಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕಾಗಿ ಪ್ರತಿ ನಗರಕ್ಕೂ ಅನುದಾನ ನೀಡುತ್ತದೆ. ಅಷ್ಟೇ ಅನುದಾನವನ್ನು ರಾಜ್ಯ ಸರ್ಕಾರಗಳೂ ನೀಡಬೇಕು. ನಗರಗಳಲ್ಲಿ ಸೌಕರ್ಯ ಕಲ್ಪಿಸಬೇಕು. 2015-16ನೇ ಸಾಲಿನಿಂದ ತನ್ನ ಪಾಲಿನ 9824 ಕೋಟಿ ರು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಆದರೆ ರಾಜ್ಯಗಳು ಅಷ್ಟೇ ಮೊತ್ತ ಬಿಡುಗಡೆ ಮಾಡಬೇಕಿತ್ತಾದರೂ ಮಾಡಿಲ್ಲ. ಹೀಗಾಗಿ ಕೇಂದ್ರದ ಬಹುಪಾಲು ಹಣ ರಾಜ್ಯ ಸರ್ಕಾರಗಳ ಬಳಿ ಕೊಳೆಯುತ್ತಿದೆ. ಇದರಿಂದಾಗಿ ಮೋದಿ ಕನಸಿನ ಯೋಜನೆಗೆ ಭಾರಿ ಹಿನ್ನಡೆಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲು ಆಯ್ಕೆಯಾದ ಪ್ರತಿ ನಗರವೂ ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ಸ್ಥಾಪನೆ ಮಾಡಬೇಕು. ಅದರ ಮೂಲಕ ಹಣ ಬಳಕೆ ಮಾಡಬೇಕು. ಆದರೆ ಕೆಲವು ಬುದ್ಧಿವಂತ ನಗರಾಡಳಿತಗಳು ಕೇಂದ್ರದ ಹಣವನ್ನು ಉಳಿತಾಯ ಖಾತೆಯಲ್ಲಿಟ್ಟರೆ ಶೇ.4ರಷ್ಟು ಮಾತ್ರವೇ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಠೇವಣಿಯನ್ನಾಗಿ ಪರಿವರ್ತಿಸಿವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಹುತೇಕ ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಬೃಹತ್ ಕೆಲಸಗಳು ಕಂಡುಬಂದಿಲ್ಲ. ವಿವರವಾದ ಯೋಜನಾ ವರದಿ ತಯಾರಿಸುವ, ಟೆಂಡರ್ ಆಹ್ವಾನಿಸುವ ಕಾರ್ಯಗಳಷ್ಟೇ ನಡೆಯುತ್ತಿದ್ದು, ಇದು ಚಿಂತೆಗೆ ಕಾರಣವಾಗಿದೆ ಎಂದಿದ್ದಾರೆ.

ಈ ಸಂಬಂಧ ಸೆ.13ರಂದು ವಸತಿ ಸಚಿವಾಲಯಕ್ಕೆ ಪತ್ರ ಬರೆದಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಿದ್ಧತಾ ಕೆಲಸಗಳನ್ನು ಪೂರ್ಣಗೊಳಿಸುವ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಮತ್ತೊಂದೆಡೆ ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರಗಳ ಜತೆಗೂ ವಸತಿ ಸಚಿವಾಲಯ ಚರ್ಚಿಸಿದೆ.

ಮೊದಲ ಕಂತಿನಲ್ಲಿ ಬಿಡುಗಡೆಯಾಗಿ ರುವ ಹಣ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ 2ನೇ ಕಂತನ್ನು ಬಿಡುಗಡೆ ಮಾಡುವುದಿಲ್ಲ ಎಂದು ತಿಳಿಸಿದ್ದೇವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಮೀರ್ ತಿಳಿಸಿದ್ದಾರೆ.