ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ​ಯಿಸಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಓಲಾ ಮತ್ತು ಉಬರ್‌ ಚಾಲಕರು ಹಾಗೂ ಕಂಪನಿಯ ಅಧಿಕಾರಿ​ಗಳ ಜತೆ ಸೋಮವಾರ ಸುಮಾರು 7 ಗಂಟೆಗಳ ಕಾಲ ಸಭೆ ನಡೆಸಿ ಅವರು, ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳು ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದರು.

ಬೆಂಗಳೂರು(ಜ.31): ಮೋಟಾರ್‌ ಕಾಯ್ದೆ ನಿಯಮ ಉಲ್ಲಂಘಿಸಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗಳಾದ ಓಲಾ ಮತ್ತು ಉಬರ್‌ ನಡೆಸುತ್ತಿರುವ ಶೇರಿಂಗ್‌ ಹಾಗೂ ಪೂಲಿಂಗ್‌ ವ್ಯವಸ್ಥೆ​ಯನ್ನು 3 ದಿನಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಸಾರಿಗೆ ಇಲಾಖೆ ಆಯುಕ್ತ ಎಂ.ಕೆ. ಅಯ್ಯಪ್ಪ ಸೂಚಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ​ಯಿಸಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಓಲಾ ಮತ್ತು ಉಬರ್‌ ಚಾಲಕರು ಹಾಗೂ ಕಂಪನಿಯ ಅಧಿಕಾರಿ​ಗಳ ಜತೆ ಸೋಮವಾರ ಸುಮಾರು 7 ಗಂಟೆಗಳ ಕಾಲ ಸಭೆ ನಡೆಸಿ ಅವರು, ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳು ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಶಾಲಾ ವಾಹನ, ಬಿಎಂಟಿಸಿ ಹಾಗೂ ಕಾರ್ಖಾನೆಗಳ ವಾಹನಗಳಿಗೆ ಮಾತ್ರ ರಹದಾರಿಯಲ್ಲಿ ಶೇರಿಂಗ್‌ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಶೇರಿಂಗ್‌ ವ್ಯವಸ್ಥೆ ಮೂಲಕ ನಿಯಮ ಬಾಹಿರವಾಗಿ ಸಾರ್ವಜನಿಕ ಸೇವೆ ನೀಡುತ್ತಿವೆ. ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕೇ ಹೊರತು, ಶೇರಿಂಗ್‌ ವ್ಯವಸ್ಥೆಯಲ್ಲಿ ಇನ್ನೊಬ್ಬ ಪ್ರಯಾ​ಣಿ​ಕರನ್ನು ಹತ್ತಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಮೂರು ದಿನದಲ್ಲಿ ಈ ಸೇವೆ​ಯನ್ನು ಸ್ಥಗಿತಗೊಳಿಸಲು ಟ್ಯಾಕ್ಸಿ ಸೇವೆ ಸಂಸ್ಥೆಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದೇನೆ ಎಂದು ಅಯ್ಯಪ್ಪ ತಿಳಿಸಿದರು.
ಶೇರಿಂಗ್‌ ಹಾಗೂ ಪೂಲಿಂಗ್‌ ವ್ಯವಸ್ಥೆ​ಯನ್ನು ಕೆಲ ತಿಂಗಳ ಹಿಂದೆಯೇ ಓಲಾ, ಉಬರ್‌ ಜಾರಿಗೆ ತಂದಿದ್ದರೂ ಸಾರಿಗೆ ಇಲಾಖೆಯ ಗಮನಕ್ಕೆ ಬಂದಿಲ್ಲ. ಇದೀಗ ಗಮನಕ್ಕೆ ಬಂದಿದ್ದು, 3 ದಿನಗಳ ನಂತರವೂ ಶೇರಿಂಗ್‌ ವ್ಯವಸ್ಥೆ ಮುಂದುವರಿಸಿದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾತಿನ ಚಕಮಕಿ

ಚಾಲಕರಿಗೆ ವಿಧಿಸುವ ದಂಡದ (ಡ್ರೈವರ್‌ ಡಿಲೇ ಡ್ಯೂಟಿ ಹೆಸರಿನಲ್ಲಿ) ಮೊತ್ತ ಇಳಿಸುವುದು, ಕನ್ನಡದಲ್ಲಿ ಕರಾರು ಪತ್ರ, ದಿನದ ಟ್ರಿಪ್‌ಗಳ ಕಡಿತ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಓಲಾ ಸಂಸ್ಥೆಯ ದೆಹಲಿ ಪ್ರತಿನಿಧಿ ಇಕ್ತಿಯಾರ್‌ ಒಂದು ವಾರದ ಗಡುವು ಕೇಳಿದ್ದಾರೆ. ಆದರೆ, ಉಬರ್‌ ಪ್ರತಿನಿಧಿ ಕಿರಣ್‌, ಯಾವುದೇ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ದೇಶ-​ವಿದೇಶಗಳಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಣೆ ಮಾಡುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 150ಕ್ಕೂ ಅಧಿಕ ಚಾಲಕರು ಏಕಾಏಕಿ ಜಗಳಕ್ಕೆ ಇಳಿದರು. ಅಧಿಕಾರಿ ಹಾಗೂ ಚಾಲಕರ ಸಂಘದ ಸದಸ್ಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಬಳಿಕ ಮಧ್ಯ ಪ್ರವೇಶಿದ ಪೊಲೀಸರು ವಾತವರಣ ತಿಳಿಗೊಳಿಸಿದರು. ಅಂತಿಮವಾಗಿ ಎರಡು ಸಂಸ್ಥೆಗಳಿಗೂ ಒಂದು ವಾರದ ಗಡುವು ನೀಡಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ‘ಲಾಗ್‌ಇನ್‌' ಆಗುವುದಿಲ್ಲ ಎಂದು ಚಾಲಕರು ಸಂಸ್ಥೆಗಳಿಗೆ ಎಚ್ಚರಿಸಿದರು.
ಸಭೆಯಲ್ಲಿ ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್‌, ಕುಮಾರ್‌, ಹೇಮಂತ್‌ ಕುಮಾರ್‌, ಚಾಲಕರ ಸಂಘಟನೆಗಳ ಮುಖಂಡರು, ಇತರರು ಉಪಸ್ಥಿತರಿದ್ದರು.